
ಬಾಗಲಕೋಟೆ, 07 ಜೂನ್ (ಹಿ.ಸ.) :
ಆಂಕರ್ : ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಬಾಗಲಕೋಟೆ ನಗರದ ನವನಗರ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ಕೆರೆಯಂತಾಗಿದ್ದವು. ಏಕಾಏಕಿ ಸುರಿದ ಮಳೆಯ ಪರಿಣಾಮ ಪ್ರಮುಖ ರಸ್ತೆಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಚಾಲಕರು ತೀವ್ರ ಸಂಕಷ್ಟ ಅನುಭವಿಸುವಂತಾಯಿತು.
ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಹಲವು ರಸ್ತೆಗಳಲ್ಲಿ ಸುಮಾರು ಎರಡು ಅಡಿಗೂ ಅಧಿಕ ಎತ್ತರದ ನೀರು ನಿಂತಿತ್ತು. ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ಬೈಕ್ ಸವಾರರು ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸೈಲೆನ್ಸರ್ ಪೈಪ್ಗಳಲ್ಲಿ ನೀರು ನುಗ್ಗಿ ವಾಹನ ಬಂದ್ ಆಗುವ ಭೀತಿಯಿಂದ ಅನೇಕರು ನಿಧಾನವಾಗಿ ಸಂಚರಿಸುತ್ತಿರುವುದು ಕಂಡು ಬಂತು.
ಕೆಲವೆಡೆ ನೀರಿನ ಆಳ ಅಂದಾಜು ಮಾಡಲಾಗದೆ ಸವಾರರು ಮಧ್ಯ ರಸ್ತೆಯಲ್ಲೇ ಸಿಲುಕಿಕೊಂಡ ಘಟನೆಗಳೂ ನಡೆದಿವೆ. ಕೆಲವು ಬೈಕ್ಗಳ ಸೈಲೆನ್ಸರ್ ಪೈಪ್ಗಳಲ್ಲಿ ನೀರು ನುಗ್ಗಿದ ಪರಿಣಾಮ ವಾಹನಗಳು ಏಕಾಏಕಿ ಸ್ಥಗಿತಗೊಂಡಿದ್ದು, ಸವಾರರು ವಾಹನಗಳನ್ನು ತಳ್ಳಿಕೊಂಡು ಸಾಗಬೇಕಾದ ಪರಿಸ್ಥಿತಿ ಎದುರಾಯಿತು. ಮಳೆ ನೀರಿನಲ್ಲಿ ವಾಹನಗಳನ್ನು ತಳ್ಳುತ್ತಾ ಪರದಾಡಿದ ದೃಶ್ಯಗಳು ಸಾರ್ವಜನಿಕರ ಗಮನ ಸೆಳೆದವು.
ಜಿಲ್ಲಾ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶ, ಎಸ್ಬಿಐ ಬ್ಯಾಂಕ್ ಬಳಿಯ ರಸ್ತೆ ಸೇರಿದಂತೆ ನವನಗರದ ಬಹುತೇಕ ಪ್ರಮುಖ ರಸ್ತೆಗಳು ನೀರಿನಿಂದ ಆವೃತಗೊಂಡಿದ್ದವು.
ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಗುಂಡಿಗಳು ಕಾಣಿಸದೆ ವಾಹನ ಸವಾರರು ಅಪಘಾತದ ಭೀತಿಯಲ್ಲಿಯೇ ಸಂಚರಿಸಿದರು. ಕೆಲವೆಡೆ ಪಾದಚಾರಿಗಳಿಗೂ ರಸ್ತೆ ದಾಟುವುದು ಸವಾಲಾಗಿ ಪರಿಣಮಿಸಿತು.
ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಚರಂಡಿ ವ್ಯವಸ್ಥೆ ಹಾಗೂ ನೀರು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮಳೆಗಾಲ ಆರಂಭದಲ್ಲೇ ಈ ರೀತಿಯ ಪರಿಸ್ಥಿತಿ ಎದುರಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಸುರಿದರೆ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿಯೂ ಮಳೆಯ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಗರಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನೀರು ನಿಲ್ಲುವ ಪ್ರದೇಶಗಳಲ್ಲಿ ತ್ವರಿತ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
ನವನಗರದಲ್ಲಿ ಸುರಿದ ಭಾರೀ ಮಳೆಯು ನಗರ ಮೂಲಸೌಕರ್ಯದ ಸವಾಲುಗಳನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದು, ರಸ್ತೆಗಳಲ್ಲಿ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಹಿಡಿಯುವ ಅಗತ್ಯತೆಯನ್ನು ಸಾರ್ವಜನಿಕರು ಒತ್ತಿ ಹೇಳುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande