ಸಿಇಟಿ ಪರೀಕ್ಷೆಯಲ್ಲಿ ರೈತರ ಮಕ್ಕಳ ಅದ್ಭುತ ಸಾಧನೆ ; ರಾಜ್ಯ ರ್ಯಾಂಕ್ ಪಡೆದು ವಿಜಯಪುರಕ್ಕೆ ಕೀರ್ತಿ ತಂದ ಬಸವರಾಜ ಅವಟಿ ಮತ್ತು ಅನುಷಾ ಹೊಸೂರ
ವಿಜಯಪುರ, 07 ಜೂನ್ (ಹಿ.ಸ.) : ಆಂಕರ್ : ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (K-CET)ಯಲ್ಲಿ ವಿಜಯಪುರ ಜಿಲ್ಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ್ಯಾಂಕ್ಗಳನ್ನು ಪಡೆದು ಬಸವನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ರೈತ ಕುಟುಂಬಗಳಿಂದ ಬಂದಿರುವ ಬಸವರಾಜ ಅವಟಿ ಮತ್ತು ಅನುಷಾ ಹ
Cet


ಸಾಧನೆ


ವಿಜಯಪುರ, 07 ಜೂನ್ (ಹಿ.ಸ.) :

ಆಂಕರ್ : ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (K-CET)ಯಲ್ಲಿ ವಿಜಯಪುರ ಜಿಲ್ಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ್ಯಾಂಕ್ಗಳನ್ನು ಪಡೆದು ಬಸವನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ರೈತ ಕುಟುಂಬಗಳಿಂದ ಬಂದಿರುವ ಬಸವರಾಜ ಅವಟಿ ಮತ್ತು ಅನುಷಾ ಹೊಸೂರ ಅವರು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ವಿಜಯಪುರದ ಸರ್ಕಾರಿ ಪಿಯು ಬಾಲಕರ ಕಾಲೇಜಿನ ವಿದ್ಯಾರ್ಥಿ ಬಸವರಾಜ ಅವಟಿ ಹಲವು ವಿಭಾಗಗಳಲ್ಲಿ ರಾಜ್ಯದ ಅಗ್ರ ರ್ಯಾಂಕ್ಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ವೆಟರ್ನರಿ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ, ಬಿ.ಎಸ್ಸಿ ನರ್ಸಿಂಗ್ನಲ್ಲಿ 4ನೇ ಸ್ಥಾನ, ಫಾರ್ಮಾ-ಡಿ ಹಾಗೂ ಬಿ.ಫಾರ್ಮಾ ವಿಭಾಗಗಳಲ್ಲಿ 6ನೇ ಸ್ಥಾನ ಮತ್ತು ಯೋಗ ಹಾಗೂ ನ್ಯಾಚರೋಪಥಿ ವಿಭಾಗದಲ್ಲಿ 10ನೇ ಸ್ಥಾನ ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ವಿಜಯಪುರ ತಾಲೂಕಿನ ರೈತ ಕುಟುಂಬದ ಬಸವರಾಜ ಅವರು 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದಾರೆ. ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದರೂ, ಇನ್ನೂ ಉತ್ತಮ ರ್ಯಾಂಕ್ ಪಡೆದು ದೆಹಲಿಯ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಲ್ಲಿ ಪ್ರವೇಶ ಪಡೆಯುವ ಗುರಿಯೊಂದಿಗೆ ಮತ್ತೊಮ್ಮೆ ತಯಾರಿ ನಡೆಸುತ್ತಿದ್ದಾರೆ.

ಯಾವುದೇ ಕೋಚಿಂಗ್ ಪಡೆಯದೆ ಸ್ವಯಂ ಅಧ್ಯಯನದ ಮೂಲಕ ಇಂತಹ ಸಾಧನೆ ಮಾಡಿರುವುದು ವಿಶೇಷವಾಗಿದೆ.

ಇನ್ನೊಂದೆಡೆ ವಿಜಯಪುರ ನಗರದ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅನುಷಾ ಹೊಸೂರ ಕೂಡ ರೈತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು, ರೈತರ ಮಕ್ಕಳ ಕೋಟಾದಡಿ ಬಿ.ಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಹಾಗೂ ವೆಟರ್ನರಿ ವಿಭಾಗದಲ್ಲಿ 4ನೇ ರ್ಯಾಂಕ್ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿ ಪರಿಣಮಿಸಿದೆ.

ಇಬ್ಬರು ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ತಜ್ಞರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ. ಶ್ರಮ, ಸಂಕಲ್ಪ ಮತ್ತು ಆತ್ಮವಿಶ್ವಾಸ ಇದ್ದರೆ ಗ್ರಾಮೀಣ ಹಿನ್ನೆಲೆ ಹಾಗೂ ಸೀಮಿತ ಸಂಪನ್ಮೂಲಗಳು ಯಶಸ್ಸಿಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಬಸವರಾಜ ಮತ್ತು ಅನುಷಾ ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಯು ವಿಜಯಪುರ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆ ತಂದಿದ್ದು, ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿಯೂ ಅವರು ಮತ್ತಷ್ಟು ಸಾಧನೆ ಮಾಡಿ ರಾಜ್ಯ ಹಾಗೂ ರಾಷ್ಟ್ರದ ಮಟ್ಟದಲ್ಲಿ ಹೆಸರು ಗಳಿಸಲಿ ಎಂಬ ಆಶಯ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande