ಉತ್ತರ ಕರ್ನಾಟಕಕ್ಕೆ ಅನ್ಯಾಯ, ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹ
ಗದಗ, 07 ಜೂನ್ (ಹಿ.ಸ.) : ಆ್ಯಂಕರ್ : ರಾಜ್ಯ ಸಚಿವ ಸಂಪುಟ ರಚನೆ ಬಳಿಕ ಸಚಿವ ಸ್ಥಾನ ಹಂಚಿಕೆ ವಿಚಾರವು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಗದಗ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿರುವುದರ ವಿರುದ್ಧ ಜಿಲ್ಲೆಯ ಕ
ಫೋಟೋ


ಗದಗ, 07 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯ ಸಚಿವ ಸಂಪುಟ ರಚನೆ ಬಳಿಕ ಸಚಿವ ಸ್ಥಾನ ಹಂಚಿಕೆ ವಿಚಾರವು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಗದಗ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿರುವುದರ ವಿರುದ್ಧ ಜಿಲ್ಲೆಯ ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಸಂಪುಟ ವಿಸ್ತರಣೆಯಲ್ಲಿಯೂ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಯುವ ಮುಖಂಡ ಅನಿಲಕುಮಾರ್ ಫ. ಸಿದ್ದಮ್ಮನಹಳ್ಳಿ ಮತ್ತು ಕಾಂಗ್ರೆಸ್ ಎಸ್.ಟಿ. ಘಟಕದ ಜಿಲ್ಲಾ ಉಪಾಧ್ಯಕ್ಷ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಮುಖಂಡರು, ಎಚ್.ಕೆ. ಪಾಟೀಲ ಅವರು ಕೇವಲ ಗದಗ ಕ್ಷೇತ್ರದ ಶಾಸಕರಷ್ಟೇ ಅಲ್ಲ, ರಾಜ್ಯ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ಮುತ್ಸದ್ದಿ ನಾಯಕರು. ಪಕ್ಷ ಸಂಘಟನೆ, ಆಡಳಿತಾತ್ಮಕ ಅನುಭವ, ಸಂಸದೀಯ ಜ್ಞಾನ ಹಾಗೂ ಸಾರ್ವಜನಿಕ ಬದುಕಿನಲ್ಲಿನ ಪ್ರಾಮಾಣಿಕತೆಗಾಗಿ ಹೆಸರುವಾಸಿಯಾಗಿರುವ ಅವರನ್ನು ಸಚಿವ ಸಂಪುಟದಿಂದ ಹೊರಗಿಡುವುದು ಉತ್ತರ ಕರ್ನಾಟಕ ಭಾಗಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಅನಿಲಕುಮಾರ್ ಫ. ಸಿದ್ದಮ್ಮನಹಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲೂ ಎಚ್.ಕೆ. ಪಾಟೀಲ ಅವರು ಪಕ್ಷದ ಪರವಾಗಿ ಅಚಲ ನಿಲುವು ತಾಳಿದ್ದರು. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದ ಅವರು ರಾಜ್ಯದಾದ್ಯಂತ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇಂತಹ ಹಿರಿಯ ನಾಯಕನನ್ನು ಸಚಿವ ಸಂಪುಟದಲ್ಲಿ ಪರಿಗಣಿಸದೇ ಇರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ ಎಂದು ಹೇಳಿದರು.

ಗದಗ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದಲೂ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ಅಗತ್ಯವಾಗಿದೆ. ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳು, ನೀರಾವರಿ, ಮೂಲಸೌಕರ್ಯ, ಶಿಕ್ಷಣ ಹಾಗೂ ಕೈಗಾರಿಕಾ ಬೆಳವಣಿಗೆಗೆ ಅವರ ಅನುಭವ ಮತ್ತು ನಾಯಕತ್ವ ನೆರವಾಗಲಿದೆ. ಆದರೆ ಸಚಿವ ಸಂಪುಟ ರಚನೆಯ ವೇಳೆ ಅವರ ಹೆಸರನ್ನು ಕಡೆಗಣಿಸಿರುವುದು ಜಿಲ್ಲೆಯ ಜನರಲ್ಲಿ ಬೇಸರ ಉಂಟುಮಾಡಿದೆ ಎಂದು ಅವರು ತಿಳಿಸಿದರು.

ಮುಂದಿನ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ಎಚ್.ಕೆ. ಪಾಟೀಲ ಅವರ ಹಿರಿತನ, ಅನುಭವ ಮತ್ತು ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ಮತ್ತೆ ಗದಗ ಜಿಲ್ಲೆಗೆ ಸಚಿವ ಸ್ಥಾನದಿಂದ ವಂಚನೆ ಮಾಡಿದರೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರನ್ನು ಒಗ್ಗೂಡಿಸಿ ವ್ಯಾಪಕ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಎಸ್.ಟಿ. ಘಟಕದ ಜಿಲ್ಲಾ ಉಪಾಧ್ಯಕ್ಷ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ, ಎಚ್.ಕೆ. ಪಾಟೀಲ ಅವರು ಉತ್ತರ ಕರ್ನಾಟಕ ಭಾಗದ ಜನರ ಧ್ವನಿಯಾಗಿದ್ದಾರೆ. ವಿಶೇಷವಾಗಿ ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಸದಾ ಹೋರಾಟ ನಡೆಸಿದ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅಂತಹ ನಾಯಕರನ್ನು ಸಚಿವ ಸಂಪುಟದಲ್ಲಿ ಸೇರಿಸದಿರುವುದು ಕೇವಲ ಒಬ್ಬ ವ್ಯಕ್ತಿಗೆ ಆಗಿರುವ ಅನ್ಯಾಯವಲ್ಲ, ಉತ್ತರ ಕರ್ನಾಟಕದ ಜನರ ಆಶೋತ್ತರಗಳಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.

ರಾಜ್ಯದ ವಿವಿಧ ಭಾಗಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಬೇಕಾಗಿತ್ತು. ಆದರೆ ಎಚ್.ಕೆ. ಪಾಟೀಲ ಅವರಂತಹ ಅನುಭವಿ ನಾಯಕರನ್ನು ಕಡೆಗಣಿಸಿರುವುದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ಮರುಪರಿಶೀಲಿಸಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಒತ್ತಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬೇಡಿಕೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ರಾಜ್ಯ ಸಚಿವ ಸಂಪುಟದ ಮುಂದಿನ ವಿಸ್ತರಣೆಯಲ್ಲಿ ಗದಗ ಕ್ಷೇತ್ರಕ್ಕೆ ಪ್ರಾತಿನಿಧ್ಯ ಸಿಗುತ್ತದೆಯೇ ಎಂಬುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಉತ್ತರ ಕರ್ನಾಟಕ ಹಾಗೂ ಶೋಷಿತ ಸಮುದಾಯಗಳಿಗೆ ಆದ ಅನ್ಯಾಯ

ಎಚ್.ಕೆ. ಪಾಟೀಲ ಅವರು ಕೇವಲ ಗದಗ ಜಿಲ್ಲೆಯ ನಾಯಕರಲ್ಲ, ಇಡೀ ಉತ್ತರ ಕರ್ನಾಟಕದ ಧ್ವನಿ. ಹಿಂದುಳಿದ, ದಲಿತ, ಎಸ್.ಟಿ. ಸೇರಿದಂತೆ ಶೋಷಿತ ಸಮುದಾಯಗಳ ಪರವಾಗಿ ಸದಾ ನಿಂತ ನಾಯಕರು. ಇಂತಹ ಪ್ರಾಮಾಣಿಕ ಹಾಗೂ ಅನುಭವಿ ನಾಯಕರಿಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದು ಉತ್ತರ ಕರ್ನಾಟಕದ ಜನತೆಗೆ ಮತ್ತು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಮಾಡಿದ ಅನ್ಯಾಯವಾಗಿದೆ. ರಾಜ್ಯ ನಾಯಕತ್ವ ತಕ್ಷಣವೇ ಎಚ್.ಕೆ. ಪಾಟೀಲ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಶೋಷಿತ ಸಮುದಾಯಗಳು ಹಾಗೂ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಕಾಂಗ್ರೆಸ್ ಎಸ್ ಟಿ ಘಟಲದ ಜಿಲ್ಲಾ ಉಪಾಧ್ಯಕ್ಷ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande