
ಬಾಗಲಕೋಟೆ, 07 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಎಸ್ಆರ್ಎ ಶಾಲೆಯ ಹಿಂಭಾಗದಲ್ಲಿರುವ ಹಳ್ಳದ ದುಸ್ಥಿತಿಯು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕಸದ ತೊಟ್ಟಿಯಾಗಿ ಮಾರ್ಪಟ್ಟಿರುವ ಈ ಪ್ರದೇಶ ಈಗ ರೈತರ ಆಸ್ತಿಗಳ ಕಳ್ಳತನಕ್ಕೂ ಅಡ್ಡೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ ತಾಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸ್ಥಳೀಯರ ಪ್ರಕಾರ, ನಗರದ ವಿವಿಧ ಭಾಗಗಳಿಂದ ಸಂಗ್ರಹವಾಗುವ ಕಸವನ್ನು ಹಳ್ಳದ ಪ್ರದೇಶದಲ್ಲಿ ಅಕ್ರಮವಾಗಿ ಸುರಿಯಲಾಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಹಳ್ಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮರ್ಪಕ ಸ್ವಚ್ಛತೆ ಮತ್ತು ನಿರ್ವಹಣೆಯ ಕೊರತೆಯಿಂದ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕ ಆರೋಗ್ಯಕ್ಕೂ ಅಪಾಯ ಎದುರಾಗಿದೆ. ವಿಶೇಷವಾಗಿ ಸಮೀಪದಲ್ಲೇ ಶಾಲೆ ಇರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೀರಿಯಾಗಿ, ಹಳ್ಳದ ಸುತ್ತಮುತ್ತ ಬೀದಿ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಸಂಪೂರ್ಣ ಕತ್ತಲೆ ಆವರಿಸುತ್ತಿದೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಳ್ಳರು ಕೃಷಿ ಜಮೀನುಗಳಲ್ಲಿ ಅಳವಡಿಸಿರುವ ಮೋಟಾರ್ ಪಂಪ್ಸೆಟ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಲವು ರೈತರು ತಮ್ಮ ಮೋಟಾರ್ಗಳನ್ನು ಕಳೆದುಕೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಮೋಟಾರ್ಗಳ ಕಳ್ಳತನದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ಮಾಡಿ ಕೃಷಿ ನಡೆಸುತ್ತಿರುವ ಅನ್ನದಾತರಿಗೆ ಇದು ಮತ್ತೊಂದು ಹೊರೆ ಆಗಿದೆ. ನೀರಾವರಿ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿರುವುದರಿಂದ ಬೆಳೆ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಆತಂಕ ರೈತ ಸಮುದಾಯದಲ್ಲಿ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ತಾಲೂಕು ಘಟಕವು ಆಡಳಿತದ ಗಮನ ಸೆಳೆಯುವ ಉದ್ದೇಶದಿಂದ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಸಮರ್ಪಕ ರಾತ್ರಿ ಗಸ್ತು ವ್ಯವಸ್ಥೆ ಏಕೆ ಕಲ್ಪಿಸಿಲ್ಲ, ನಗರಸಭೆ ಯಾಕೆ ಬೀದಿ ದೀಪ ಅಳವಡಿಕೆ ಹಾಗೂ ಕಸ ವಿಲೇವಾರಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗಳನ್ನು ಪಕ್ಷ ಎತ್ತಿದೆ.
ನಗರಸಭೆಯ ನಿರ್ಲಕ್ಷ್ಯ ಮತ್ತು ಮೂಲಸೌಕರ್ಯಗಳ ಕೊರತೆಯೇ ಕಳ್ಳರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ ಎಂದು ಆರೋಪಿಸಿರುವ ಪಕ್ಷ, ತಕ್ಷಣವೇ ಹಳ್ಳದ ಪ್ರದೇಶದಲ್ಲಿ ಬೀದಿ ದೀಪ ಅಳವಡಿಕೆ, ಕಸದ ತೆರವು ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಜೊತೆಗೆ ಪೊಲೀಸ್ ಇಲಾಖೆ ರಾತ್ರಿ ಗಸ್ತು ಹೆಚ್ಚಿಸಿ, ರೈತರ ಮೋಟಾರ್ ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದೆ.
ಸಾರ್ವಜನಿಕರ ಸುರಕ್ಷತೆ, ವಿದ್ಯಾರ್ಥಿಗಳ ಆರೋಗ್ಯ ಹಾಗೂ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಎಚ್ಚರಿಕೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande