
ಬಾಗಲಕೋಟೆ, 07 ಜೂನ್ (ಹಿ.ಸ.) :
ಆಂಕರ್ : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಹಾಗೂ ವಿವಿಧ ಹೂಡಿಕೆ ಯೋಜನೆಗಳ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ,
ಬಾಗಲಕೋಟೆ ಜಿಲ್ಲೆಯ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.
ಹೆಚ್ಚಿನ ಲಾಭದ ಭರವಸೆ, ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಹಣ ನೀಡುವ ಆಮಿಷ ಹಾಗೂ ನಕಲಿ ಹೂಡಿಕೆ ವೇದಿಕೆಗಳ ಮೂಲಕ ವಂಚಕರು ಜನರನ್ನು ಗುರಿಯಾಗಿಸಿಕೊಂಡಿದ್ದು, ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ವರ್ತಿಸುವಂತೆ ಮನವಿ ಮಾಡಲಾಗಿದೆ.
ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಯಾವುದೇ ಹೂಡಿಕೆ ಮಾಡುವ ಮುನ್ನ ಸಂಬಂಧಿತ ಕಂಪನಿ ಹಾಗೂ ಹೂಡಿಕೆ ಯೋಜನೆಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ವಿಶೇಷವಾಗಿ ಹೂಡಿಕೆ ಸಂಸ್ಥೆಗಳು ಹಾಗೂ ಯೋಜನೆಗಳು ಭಾರತದ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಸೇರಿದಂತೆ ಮಾನ್ಯ ನಿಯಂತ್ರಕ ಸಂಸ್ಥೆಗಳ ಅನುಮೋದನೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಹೂಡಿಕೆದಾರರು ಯಾವುದೇ ಯೋಜನೆಯಲ್ಲಿ ಹಣ ಹೂಡುವ ಮುನ್ನ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಯೋಜನೆಯ ಲಾಭ-ನಷ್ಟ, ಅಪಾಯದ ಮಟ್ಟ, ಹಣ ವಾಪಸ್ ಪಡೆಯುವ ವಿಧಾನ ಸೇರಿದಂತೆ ಎಲ್ಲ ವಿವರಗಳನ್ನು ಲಿಖಿತ ರೂಪದಲ್ಲಿ ಪಡೆಯುವುದು ಅಗತ್ಯವಾಗಿದೆ.
ಸಂಶಯಾಸ್ಪದ ಭರವಸೆಗಳು, ಅಸಹಜ ಲಾಭದ ಆಮಿಷಗಳು ಹಾಗೂ ತುರ್ತು ನಿರ್ಧಾರಕ್ಕೆ ಒತ್ತಾಯಿಸುವ ವ್ಯಕ್ತಿಗಳಿಂದ ದೂರವಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ನೋಂದಾಯಿತ ಆರ್ಥಿಕ ಸಲಹೆಗಾರರ ಮಾರ್ಗದರ್ಶನ ಪಡೆಯುವುದು ಉತ್ತಮ ಕ್ರಮವಾಗಿದೆ. ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಗುಂಪುಗಳು ಹಾಗೂ ಅಪರಿಚಿತ ಕರೆಗಳ ಮೂಲಕ ಬರುವ ಹೂಡಿಕೆ ಅವಕಾಶಗಳನ್ನು ನೇರವಾಗಿ ನಂಬದೆ, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಯಾವುದೇ ಅನುಮಾನಾಸ್ಪದ ಹೂಡಿಕೆ ಚಟುವಟಿಕೆಗಳು ಕಂಡುಬಂದಲ್ಲಿ ಅಥವಾ ವಂಚನೆಗೆ ಒಳಗಾದ ಅನುಮಾನ ಇದ್ದಲ್ಲಿ ತಕ್ಷಣವೇ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸೈಬರ್ ವಂಚನೆ, ಆನ್ಲೈನ್ ಹಣಕಾಸು ಮೋಸ ಹಾಗೂ ಹೂಡಿಕೆ ವಂಚನೆಗಳ ಕುರಿತು ದೂರು ಸಲ್ಲಿಸಲು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.
ಕರ್ನಾಟಕದಲ್ಲಿ ಸೈಬರ್ ವಂಚನೆ ಪ್ರಕರಣಗಳ ತ್ವರಿತ ನಿರ್ವಹಣೆಗೆ 1930 ಸಹಾಯವಾಣಿಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಸಾರ್ವಜನಿಕರ ಜಾಗೃತಿಯೇ ಹೂಡಿಕೆ ವಂಚನೆ ತಡೆಗಟ್ಟುವ ಪ್ರಮುಖ ಅಸ್ತ್ರವಾಗಿದ್ದು, ಮೊದಲು ಪರಿಶೀಲನೆ, ನಂತರ ಹೂಡಿಕೆ ಎಂಬ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮನವಿ ಮಾಡಿದೆ. ಸೈಬರ್ ಅಪರಾಧ ಅಥವಾ ಹಣಕಾಸು ವಂಚನೆಗೆ ಸಂಬಂಧಿಸಿದ ದೂರುಗಳನ್ನು 1930 ಸಹಾಯವಾಣಿಯ ಮೂಲಕ ಅಥವಾ ಅಧಿಕೃತ ಸೈಬರ್ ಅಪರಾಧ ವ್ಯವಸ್ಥೆಗಳ ಮೂಲಕ ದಾಖಲಿಸಬಹುದು.
ಹಿಂದೂಸ್ತಾನ್ ಸಮಾಚಾರ್ / jyothi deshpande