ಜನರ ವಿಶ್ವಾಸವೇ ನನ್ನ ಶಕ್ತಿ, ಅಭಿವೃದ್ಧಿಯೇ ನನ್ನ ಧ್ಯೇಯ : ಸಚಿವ ಎಂ.ಬಿ. ಪಾಟೀಲ
ವಿಜಯಪುರ, 06 ಜೂನ್ (ಹಿ.ಸ.) : ಆಂಕರ್ : ರಾಜ್ಯ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಭವ್ಯ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡರು. ಸಾವಿರಾರು
ಸಮಾರಂಭ


ವಿಜಯಪುರ, 06 ಜೂನ್ (ಹಿ.ಸ.) :

ಆಂಕರ್ : ರಾಜ್ಯ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಭವ್ಯ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡರು.

ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಈ ಸಮಾರಂಭವು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ವಿಶೇಷ ಮಹತ್ವ ಪಡೆದುಕೊಂಡಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಜನರ ವಿಶ್ವಾಸ ಮತ್ತು ಬೆಂಬಲವೇ ತಮ್ಮ ರಾಜಕೀಯ ಬದುಕಿನ ಶಕ್ತಿ ಎಂದು ಹೇಳಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ತಮ್ಮ ಧ್ಯೇಯವಾಗಿದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯ ಅಭಿವೃದ್ಧಿಗಾಗಿ ಕೈಗೊಂಡಿರುವ ವಿವಿಧ ಯೋಜನೆಗಳ ಕುರಿತು ವಿವರಿಸಿದ ಅವರು, ಹಿಂದೆ ಬರಗಾಲದ ಹಣೆಪಟ್ಟಿ ಹೊತ್ತಿದ್ದ ವಿಜಯಪುರ ಜಿಲ್ಲೆಯನ್ನು ನೀರಾವರಿ ಸಮೃದ್ಧ ಜಿಲ್ಲೆಯನ್ನಾಗಿ ರೂಪಿಸಲು ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಜಾರಿಗೊಂಡಿರುವ ವಿವಿಧ ನೀರಾವರಿ ಯೋಜನೆಗಳು, ಕೆರೆ ತುಂಬುವ ಯೋಜನೆಗಳು ಹಾಗೂ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳಿಂದ ಇಂದು ವಿಜಯಪುರ ಜಿಲ್ಲೆ ಶೇ.95ರಷ್ಟು ನೀರಾವರಿ ಸೌಲಭ್ಯವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಹಳ್ಳ ತುಂಬುವ ಯೋಜನೆ ಸೇರಿದಂತೆ ಇನ್ನಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದು ಜಿಲ್ಲೆಯ ಪ್ರತಿಯೊಂದು ಕೃಷಿ ಭೂಮಿಗೂ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಿರುವುದಾಗಿ ಹೇಳಿದರು.

ಕೈಗಾರಿಕಾ ಸಚಿವರಾಗಿ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ ಅವರು, ಕೆಎಸ್ಡಿಎಲ್ (KSDL), ವಿಟೇರಾ, ಸುಜ್ಲಾನ್, ಕೋಕಾಕೋಲಾ ಸೇರಿದಂತೆ ಹಲವು ಪ್ರತಿಷ್ಠಿತ ಕೈಗಾರಿಕೆಗಳನ್ನು ವಿಜಯಪುರ ಜಿಲ್ಲೆಗೆ ಆಕರ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಈ ಮೂಲಕ ಜಿಲ್ಲೆಯ ಯುವಕರಿಗೆ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕೈಗಾರಿಕೆ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವ ಮೂಲಕ ವಿಜಯಪುರವನ್ನು ರಾಜ್ಯದ ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ದೃಢ ಸಂಕಲ್ಪವನ್ನು ವ್ಯಕ್ತಪಡಿಸಿದ ಸಚಿವರು, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಜನರು ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ತಮ್ಮನ್ನು ನಿರಂತರವಾಗಿ ಬೆಂಬಲಿಸಿ ಪ್ರೋತ್ಸಾಹಿಸಿದ ಪಕ್ಷದ ಹಿರಿಯ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಬಲೇಶ್ವರ ಮತಕ್ಷೇತ್ರದ ಮತದಾರರಿಗೆ ವಿಶೇಷ ಧನ್ಯವಾದ ಅರ್ಪಿಸಿದ ಅವರು, ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಶ್ರೀ ವಿಠ್ಠಲ ಕಟಕಧೋಂಡ, ಜಿಲ್ಲಾ ಕಾಂಗ್ರೆಸ್ ಮುಖಂಡರು, ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸಮಾರಂಭವು ಉತ್ಸಾಹಭರಿತ ವಾತಾವರಣದಲ್ಲಿ ನಡೆಯುತ್ತಿದ್ದು, ಸಚಿವ ಎಂ.ಬಿ. ಪಾಟೀಲ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆಯನ್ನು ಮುಖಂಡರು ಮತ್ತು ಕಾರ್ಯಕರ್ತರು ಶ್ಲಾಘಿಸಿದರು.

ಅಭಿನಂದನಾ ಸಮಾರಂಭವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಜಿಲ್ಲೆಯ ಅಭಿವೃದ್ಧಿಯ ಕುರಿತ ಸಚಿವರ ಭರವಸೆಗಳು ಜನರಲ್ಲಿ ಆಶಾಭಾವನೆ ಮೂಡಿಸಿವೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande