
ಬೆಂಗಳೂರು, 05 ಜೂನ್ (ಹಿ.ಸ.) :
ಆ್ಯಂಕರ್ : ವಿಶ್ವ ಪರಿಸರ ದಿನದ ಅಂಗವಾಗಿ ಬೆಂಗಳೂರಿನಲ್ಲಿ ಪಿಸಿಎ ಟ್ರಸ್ಟ್ ವತಿಯಿಂದ ಪಿಸಿಎ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಟ್ಯೂಷನ್ ಕೇಂದ್ರದ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಸಸಿ ನೆಡುವುದು ಹಾಗೂ ಸಸಿಗಳಿಗೆ ನೀರು ಹಾಕುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಸುಸ್ಥಿರ ಜೀವನಶೈಲಿಯ ಅಗತ್ಯತೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು. ಮಕ್ಕಳು ಪ್ರಕೃತಿಯ ಮಹತ್ವವನ್ನು ತಿಳಿದುಕೊಂಡು, ಮರಗಳನ್ನು ಬೆಳೆಸುವ ಮತ್ತು ಪರಿಸರವನ್ನು ಕಾಪಾಡುವ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಸಿಎ ಟ್ರಸ್ಟ್ನ ಪ್ರತಿನಿಧಿಗಳು, “ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಪರಿಸರ ಸಂರಕ್ಷಣೆಯ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
“ಪ್ರಕೃತಿಯನ್ನು ರಕ್ಷಿಸಿ – ನಮ್ಮ ಭವಿಷ್ಯವನ್ನು ರಕ್ಷಿಸಿ” ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮವು ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.
ಪಿಸಿಎ ಟ್ರಸ್ಟ್ “ಉತ್ತಮ ಕಲಿಕೆ, ಉತ್ತಮ ಸಮಾಜ, ಉತ್ತಮ ಭವಿಷ್ಯಕ್ಕಾಗಿ” ಎಂಬ ಧ್ಯೇಯದೊಂದಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದು, ವಿಶ್ವ ಪರಿಸರ ದಿನದ ಈ ಆಚರಣೆ ಸಮಾಜದಲ್ಲಿ ಹಸಿರು ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.