ಗದಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಯುವಕ ಸಾವು
ಗದಗ, 05 ಜೂನ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ಸಿಡಿಲು ಬಡಿದು 19 ವರ್ಷದ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಭಾರಿ ಮಳೆ, ಗುಡುಗು ಮತ್ತು ಸಿಡಿಲಿನ ಅಬ್ಬರದ ನಡುವೆ ನಡೆದ ಈ ಘಟನೆ ಇಡೀ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳ
ಫೋಟೋ


ಗದಗ, 05 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ಸಿಡಿಲು ಬಡಿದು 19 ವರ್ಷದ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಭಾರಿ ಮಳೆ, ಗುಡುಗು ಮತ್ತು ಸಿಡಿಲಿನ ಅಬ್ಬರದ ನಡುವೆ ನಡೆದ ಈ ಘಟನೆ ಇಡೀ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತ ಯುವಕನನ್ನು ರಾಜೂರು ಗ್ರಾಮದ ಪ್ರಶಾಂತ್ ಹುಡೇದ (19) ಎಂದು ಗುರುತಿಸಲಾಗಿದೆ. ಸಂಜೆ ವೇಳೆಯಲ್ಲಿ ಗ್ರಾಮ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಪ್ರಶಾಂತ್ ಹಾಗೂ ಅವನ ಸಹೋದರ ಜಮೀನಿನತ್ತ ಜಾನುವಾರುಗಳನ್ನು ಮೇಯಿಸಲು ತೆರಳಿದ್ದರು. ಈ ವೇಳೆ ಹವಾಮಾನ ಏಕಾಏಕಿ ಬದಲಾಗಿದ್ದು, ಗುಡುಗು-ಸಿಡಿಲಿನ ಆರ್ಭಟ ಹೆಚ್ಚಾಗಿದೆ.

ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಪ್ರಶಾಂತ್ ತನ್ನ ಸಹೋದರನಿಂದ ಸುಮಾರು 60 ಮೀಟರ್ ದೂರದಲ್ಲಿದ್ದನು. ಇದೇ ಸಂದರ್ಭದಲ್ಲಿ ಭಾರೀ ಸದ್ದು ಮಾಡುತ್ತಾ ಸಿಡಿಲು ನೇರವಾಗಿ ಪ್ರಶಾಂತ್ಗೆ ಬಡಿದಿದೆ. ಸಿಡಿಲಿನ ತೀವ್ರತೆಗೆ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೆಲವೇ ಕ್ಷಣಗಳ ಹಿಂದೆ ಸಹೋದರನೊಂದಿಗೆ ಮಾತನಾಡುತ್ತಿದ್ದ ಪ್ರಶಾಂತ್ ಕಣ್ಣೆದುರೇ ನೆಲಕ್ಕುರುಳಿರುವುದನ್ನು ಕಂಡ ಅಣ್ಣ ಆತಂಕಗೊಂಡು ಓಡಿಬಂದಿದ್ದಾನೆ.

ಆದರೆ ಅಷ್ಟರಲ್ಲಾಗಲೇ ಪ್ರಶಾಂತ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸಿಡಿಲು ಬಡಿದ ಭೀಕರ ದೃಶ್ಯವನ್ನು ಕಣ್ಣಾರೆ ಕಂಡ ಸಹೋದರ ಆಘಾತಕ್ಕೊಳಗಾಗಿದ್ದು, ಘಟನೆಯ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದ್ದಾರೆ. ಯುವಕನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಪ್ರಶಾಂತ್ ಕುಟುಂಬದ ಆಶಾಕಿರಣವಾಗಿದ್ದ ಯುವಕನಾಗಿದ್ದು, ಆತನ ಅಕಾಲಿಕ ಮರಣದಿಂದ ಕುಟುಂಬಕ್ಕೆ ದೊಡ್ಡ ಆಘಾತ ಉಂಟಾಗಿದೆ. ಗ್ರಾಮದ ಯುವಕರಲ್ಲಿ ಚುರುಕು ಮತ್ತು ಸ್ನೇಹಪರ ವ್ಯಕ್ತಿತ್ವ ಹೊಂದಿದ್ದ ಪ್ರಶಾಂತ್ ಸಾವಿನಿಂದ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

ಕಳೆದ ಕೆಲವು ದಿನಗಳಿಂದ ಗದಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಸಿಡಿಲು ಸಹಿತ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಮಳೆಯ ಸಮಯದಲ್ಲಿ ತೆರವಾದ ಜಾಗಗಳಲ್ಲಿ ನಿಲ್ಲದಂತೆ ಹಾಗೂ ಮರಗಳ ಕೆಳಗೆ ಆಶ್ರಯ ಪಡೆಯದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಒಂದೇ ಕ್ಷಣದಲ್ಲಿ ಸಂಭವಿಸಿದ ಈ ಪ್ರಕೃತಿ ವಿಕೋಪದ ದುರ್ಘಟನೆ ರಾಜೂರು ಗ್ರಾಮದಲ್ಲಿ ನೋವಿನ ಛಾಯೆ ಮೂಡಿಸಿದ್ದು, ಕಣ್ಣೆದುರೇ ತಮ್ಮನನ್ನು ಕಳೆದುಕೊಂಡ ಸಹೋದರನ ರೋದನ ಮತ್ತು ಕುಟುಂಬಸ್ಥರ ದುಃಖ ಗ್ರಾಮಸ್ಥರ ಮನಕಲಕುವಂತಾಗಿದೆ. ಸಿಡಿಲಿನ ಆರ್ಭಟಕ್ಕೆ ಯುವ ಜೀವವೊಂದು ಬಲಿಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕಕ್ಕೂ ಕಾರಣವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande