
ಕೋಲಾರ, ೦೫ ಜೂನ್ (ಹಿ.ಸ) :
ಆ್ಯಂಕರ್ : ಪ್ರತಿ ವಿದ್ಯಾರ್ಥಿಗೊಂದು ಗಿಡ ಎಂಬ ಧ್ಯೇಯವಾಕ್ಯದೊಂದಿಗೆ ಪರಿಸರ ಸಂರಕ್ಷಣೆಗೆ ಮಕ್ಕಳು ಪಣತೊಡಬೇಕು, ಶಾಲೆಯ ಪರಿಸರವನ್ನು ಮತ್ತಷ್ಟು ಹಸಿರಾಗಿಸಬೇಕು ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಕರೆ ನೀಡಿದರು.
ಶಾಲೆಯ ಆವರಣದಲ್ಲಿ ಶಾಲೆಯ ಪರಿಸರ ಕ್ಲಬ್ ವತಿಯಿಂದ ಗಿಡಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಸಂರಕ್ಷಣೆ ಯಾರೋ ಮಾಡಲಿ ಎಂದು ಯೋಚಿಸುವುದು ತಪ್ಪು, ಜೀವನ ಮತ್ತು ನೆಮ್ಮದಿ ನಾಶ ತಪ್ಪಿಸಲು ಪರಿಸರ ಸಂರಕ್ಷಿಸುವ ಸಂಕಲ್ಪ ಮಾಡೋಣ, ಗಿಡಮರಗಳನ್ನು ಪೋಷಿಸೋಣ. ಪರಿಸರ ಎಂದರೆ ಗಿಡ,ಮರ ಮಾತ್ರವಲ್ಲ, ಭೂಮಿ, ಜೀವಿಗಳು ಎಲ್ಲವೂ ಪರಿಸರದ ಭಾಗವೇ ಎಂದ ಅವರು, ಮುಂದಿನ ಪೀಳಿಗೆಗೆ ಪರಿಸರ,ಭೂಮಿ ಉಳಿಸಲು ಪರಿಸರಮಾಲಿನ್ಯ ಮುಕ್ತ ನವಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು, ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದರು.
ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗಿ ಅದು ಭೂಮಿಯಲ್ಲಿ ಕೊಳೆಯದ ಕಾರಣ ಭೂಮಿ ಮಾಲಿನ್ಯವಾಗುತ್ತಿದೆ, ಅದನ್ನು ತಿಂದ ದನಕರು,ಪ್ರಾಣಿಗಳಿಗೂ ಮಾರಕವಾಗುತ್ತಿದೆ ಆದ್ದರಿಂದ ಪ್ರತಿಯೊಬ್ಬರೂ ಮನೆಯಿಂದ ಹೊರ ಹೋಗುವಾಗ ಬಟ್ಟೆಯ ಕೈಚೀಲ ಬಳಸುವ ಮೂಲಕ ಪ್ಲಾಸ್ಟಿಕ್ಅನ್ನು ಸಾಧ್ಯವಾದಷ್ಟು ಬಳಸದಿರಲು ಪ್ರತಿಜ್ಞೆ ಸ್ವೀಕರಿಸಿ ಎಂದು ಸಲಹೆ ನೀಡಿದರು.
ಶಾಲೆಯ ಪರಿಸರ ಕ್ಲಬ್ ಅಧ್ಯಕ್ಷೆ ಶಿಕ್ಷಕಿ ಶ್ವೇತಾ ಮಾತನಾಡಿ, ಪರಿಸರ ನಾಶ ಮುಂದುವರೆದರೆ ಮುಂದೊAದು ದಿನ ಆಮ್ಲಜನಕ ಸಿಗದೇ ಉಸಿರಾಡಲು ತೊಂದರೆಯಾದೀತು ಎಂದು ಎಚ್ಚರಿಸಿದ ಅವರು, ಶಾಲೆಯ ಆವರಣದಲ್ಲಿ ಸ್ವಚ್ಚತೆ ಕಪಾಡುವುದು ಸಹಾ ಪರಿಸರ ಸಂರಕ್ಷಣೆಯ ಒಂದು ಭಾಗವೇ ಆಗಿದೆ. ಶಿಸ್ತು ಇರುವೆಡೆ ಸ್ವಚ್ಚತೆಯೂ ಇರುತ್ತದೆ, ಮಕ್ಕಳಿಗೆ ಪ್ರತಿನಿತ್ಯ ಐದು ನಿಮಿಷ ಪರಿಸರದ ಪ್ರಾಮುಖ್ಯತೆ ಕುರಿತು ತಿಳಿ ಹೇಳಿದರೆ ಅವರಿಂದ ಪರಿಸರ ವೈವಿಧ್ಯತೆ ಉಳಿಸುವ ನಿಟ್ಟಿನಲ್ಲಿ ಮನಃಪರಿವರ್ತನೆಯಾಗಿ ಅವರಿಂದಲೇ ಮನೆ,ಹಳ್ಳಿಯಲ್ಲೂ ಪರಿಸರ ರಕ್ಷಣೆಗೆ ಮಾರ್ಗದರ್ಶನವಾಗುತ್ತದೆ ಆದ್ದರಿಂದ ಮಕ್ಕಳು ಶಾಲೆ,ಮನೆ,ಮನಸ್ಸು ಸ್ವಚ್ಚತೆಯ ಸಂಕಲ್ಪ ಮಾಡಬೇಕು. ನಮ್ಮ ಅರಾಭಿಕೊತ್ತನೂರು ಶಾಲೆ ಬೆಟ್ಟದ ತಪ್ಪಲಲ್ಲಿ ಹಸಿರು ಸಿರಿಯ ನಡುವೆ ಇದ್ದು, ಪರಿಸರ ರಕ್ಷಣೆಗೆ ಮಾದರಿಯಾಗಿದೆ ಎಂದು ತಿಳಿಸಿ, ಪರಿಸರ ಜಾಗೃತಿ ಹಾಗೂ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿ, ಪರಿಸರ ಉಳಿಸುವ ಕಾಯಕದಲ್ಲಿ ಪ್ರತಿಯೊಬ್ಬರೂ ಕೈಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ, ಸುಗುಣಾ, ಶ್ರೀನಿವಾಸಲು ರಮಾದೇವಿ, ಚೈತ್ರಾ ಸೇರಿದಂತೆ ಪೋಷಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್