
ಬೆಂಗಳೂರು, 05 ಜೂನ್ (ಹಿ.ಸ.) :
ಆ್ಯಂಕರ್ : ರಾಷ್ಟ್ರ ಸೇವಿಕಾ ಸಮಿತಿಯ ಪೂರ್ವ ಅಖಿಲ ಭಾರತೀಯ ಸಹ ಕಾರ್ಯವಾಹಿಕರಾಗಿದ್ದ ದಿವಂಗತ ರುಕ್ಮಿಣಿ ಅಕ್ಕ ಅವರಿಗೆ ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ನ ಕೇಶವಶಿಲ್ಪಾ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ವಿ. ಶಾಂತಾಕುಮಾರಿ ಅವರು, ಲಲಿತಾ ಸಹಸ್ರನಾಮದ “ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ ಸ್ವರೂಪಿಣಿ” ಎಂಬ ವರ್ಣನೆಗೆ ರುಕ್ಮಿಣಿ ಅಕ್ಕ ಪರಿಪೂರ್ಣ ಉದಾಹರಣೆಯಾಗಿದ್ದರು ಎಂದು ಹೇಳಿದರು.
ಅವರು ಎಲ್ಲ ವರ್ಗದ ಕಾರ್ಯಕರ್ತರನ್ನು ಸಮಾನವಾಗಿ ಪ್ರೀತಿಸುತ್ತಿದ್ದು, ಸಂಘಟನಾ ಕಾರ್ಯದಲ್ಲಿ ನಿಖರತೆ ಹಾಗೂ ಆತ್ಮವಿಶ್ವಾಸಕ್ಕೆ ಹೆಸರಾಗಿದ್ದರು ಎಂದು ಸ್ಮರಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ. ನಾಗರಾಜ್ ಮಾತನಾಡಿ, ರುಕ್ಮಿಣಿ ಅಕ್ಕ ಸಮಾಜಸೇವೆಗೆ ಅರಳಿದ ಕಮಲವಾಗಿದ್ದರು. ಅವರ 97 ವರ್ಷಗಳ ಬದುಕು ಸಂಪೂರ್ಣವಾಗಿ ಸಮಾಜಕ್ಕೆ ಸಮರ್ಪಿತವಾಗಿದ್ದು, ಕರ್ನಾಟಕ ಹಾಗೂ ಅಸ್ಸಾಂನಲ್ಲಿ ಅವರ ಸೇವೆ ಅಪಾರವಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ತಮ್ಮ ಸಾರ್ವಜನಿಕ ಜೀವನದ ಬೆಳವಣಿಗೆಯಲ್ಲಿ ರುಕ್ಮಿಣಿ ಅಕ್ಕ ಅವರ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು. ಶಿಸ್ತು, ಸೇವಾ ಮನೋಭಾವ ಹಾಗೂ ಸಮಾಜದ ಬಗ್ಗೆ ಕಾಳಜಿಯನ್ನು ಅವರು ತಮ್ಮ ಜೀವನದ ಮೂಲಕವೇ ಕಲಿಸಿಕೊಟ್ಟರು ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ವಿವಿಧ ಹಂತಗಳ ಪದಾಧಿಕಾರಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು, ಸಮಾಜಸೇವಕರು ಹಾಗೂ ನೂರಾರು ಕಾರ್ಯಕರ್ತೆಯರು ಉಪಸ್ಥಿತರಿದ್ದು, ರುಕ್ಮಿಣಿ ಅಕ್ಕ ಅವರ ಸೇವಾ ಜೀವನವನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.