ತೆಲಂಗಾಣ-ಕರ್ನಾಟಕ ಜಲ ಸಹಕಾರಕ್ಕೆ ರೇವಂತ್ ರೆಡ್ಡಿ ಭರವಸೆ : ಎನ್.ಎಸ್.ಭೋಸರಾಜು
ಬೆಂಗಳೂರು, 05 ಜೂನ್ (ಹಿ.ಸ.) : ಆ್ಯಂಕರ್ : ಅಂತರರಾಜ್ಯ ಜಲ ಭದ್ರತೆ, ರೈತರ ಅಭಿವೃದ್ಧಿ ಹಾಗೂ ಗಡಿಭಾಗದ ಜಿಲ್ಲೆಗಳ ಸಮಗ್ರ ಪ್ರಗತಿಗೆ ತೆಲಂಗಾಣ ಸರ್ಕಾರವು ಕರ್ನಾಟಕದೊಂದಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಎನ್.ಎಸ್.ಭೋಸ
Visit


ಬೆಂಗಳೂರು, 05 ಜೂನ್ (ಹಿ.ಸ.) :

ಆ್ಯಂಕರ್ : ಅಂತರರಾಜ್ಯ ಜಲ ಭದ್ರತೆ, ರೈತರ ಅಭಿವೃದ್ಧಿ ಹಾಗೂ ಗಡಿಭಾಗದ ಜಿಲ್ಲೆಗಳ ಸಮಗ್ರ ಪ್ರಗತಿಗೆ ತೆಲಂಗಾಣ ಸರ್ಕಾರವು ಕರ್ನಾಟಕದೊಂದಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಎನ್.ಎಸ್.ಭೋಸರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಸಚಿವ ಸಂಪುಟದ ಪ್ರಮುಖರೊಂದಿಗೆ ಗುಡೆಂದೊಡ್ಡಿ ಜಲಾಶಯದ ಪಂಪ್ಹೌಸ್, ಮಖ್ತಲ್–ನಾರಾಯಣಪೇಟ್–ಕೊಡಂಗಲ್ ಏತ ನೀರಾವರಿ ಯೋಜನೆ ಮತ್ತು ಪ್ರಸ್ತಾವಿತ ಭೀಮಾ–ಕೃಷ್ಣಾ ಬ್ಯಾರೇಜ್ ಪ್ರದೇಶಗಳಿಗೆ ಭೇಟಿ ನೀಡಿ ಪ್ರಮುಖ ಜಲ ಯೋಜನೆಗಳ ಪರಿಶೀಲನೆ ನಡೆಸಲಾಯಿತು.

ನಾರಾಯಣಪುರ (ಬಸವಸಾಗರ) ಜಲಾಶಯದ ಕೆಳಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಬ್ಯಾರೇಜ್ ಮೂಲಕ ಸ್ಪಿಲ್ವೇಯಿಂದ ಬಿಡುಗಡೆಯಾಗುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದ ಕರ್ನಾಟಕ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಗೆ ಲಾಭವಾಗಲಿದ್ದು, ವಿಶೇಷವಾಗಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ.

ಈ ಬ್ಯಾರೇಜ್ ನಿರ್ಮಾಣದಿಂದ ಹಾಲಿ ಏತ ನೀರಾವರಿ ಯೋಜನೆಗಳಿಗೆ ಸಹ ನೆರವಾಗಲಿದ್ದು, ರಾಯಚೂರು ಮತ್ತು ತೆಲಂಗಾಣ ನಡುವಿನ ಸಂಪರ್ಕ ವ್ಯವಸ್ಥೆಯೂ ಸುಧಾರಿಸಿ, ಗಡಿಭಾಗದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಬೋಸರಾಜು ಹೇಳಿದ್ದಾರೆ.

ಭೀಮಾ ಮತ್ತು ಕೃಷ್ಣಾ ನದಿಗಳ ಮೇಲಿನ ನೀರಾವರಿ ಯೋಜನೆಗಳು ಮುಂಗಾರು ನೀರಿನ ಸಂರಕ್ಷಣೆ, ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಳ, ಅಂತರ್ಜಲ ಮರುಪೂರಣ ಹಾಗೂ ಹವಾಮಾನ ವೈಪರೀತ್ಯ ಎದುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಇವು ಕೇವಲ ಮೂಲಸೌಕರ್ಯ ಯೋಜನೆಗಳಲ್ಲ, ಪ್ರದೇಶದ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಭದ್ರತೆಗೆ ಅಗತ್ಯವಾದ ಹೂಡಿಕೆಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹವಾಮಾನ ಬದಲಾವಣೆಯ ಸವಾಲುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಲಭ್ಯವಿರುವ ಪ್ರತಿಯೊಂದು ಹನಿ ನೀರಿನ ಸಮರ್ಪಕ ನಿರ್ವಹಣೆ ಅತ್ಯಗತ್ಯವಾಗಿದ್ದು, ವೈಜ್ಞಾನಿಕ ಯೋಜನೆ, ಅಂತರರಾಜ್ಯ ಸಹಕಾರ ಮತ್ತು ಸುಸ್ಥಿರ ಜಲ ಮೂಲಸೌಕರ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಬೋಸರಾಜು ಒತ್ತಿಹೇಳಿದರು.

ತೆಲಂಗಾಣ ಸರ್ಕಾರದ ರೈತಪರ ಮತ್ತು ಜಲ ಭದ್ರತಾ ಬದ್ಧತೆಯನ್ನು ಶ್ಲಾಘಿಸಿದ ಅವರು, ನದಿಗಳನ್ನು ಹಂಚಿಕೊಂಡಿರುವ ಕರ್ನಾಟಕ ಮತ್ತು ತೆಲಂಗಾಣ ಪರಸ್ಪರ ಸಹಕಾರ ಹಾಗೂ ನವೀನ ಯೋಜನೆಗಳ ಮೂಲಕ ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನು ನಿರ್ಮಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande