
ಕೊಪ್ಪಳ, 05 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವೆಂಕಟಗಿರಿ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಬೆಣಕಲ್ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ರೇಬೀಸ್ (ನಾಯಿ ಕಡಿತ) ಜಾಗೃತಿ ಕಾರ್ಯಕ್ರಮ ನಡೆಯಿತು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ದೇವಮ್ಮ ಅವರು ಕಾರ್ಯಕ್ರಮ ಕುರಿತು ಮಾತನಾಡಿ, ನಾಯಿ ಕಡಿತದಿಂದ ಸಾರ್ವಜನಿಕರು ಜಾಗೃತರಾಗಬೇಕು. ಈ ಹಿನ್ನೆಲೆಯಲ್ಲಿ ರೇಬೀಸ್ ಖಾಯಿಲೆಯಿಂದ ಉಂಟಾಗುವ ಸಾವು-ನೋವುಗಳನ್ನು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ರೇಬೀಸ್ ವೈರಸ್ ಸೋಂಕಿತ ಪ್ರಾಣಿಗಳು ಮನುಷ್ಯರಿಗೆ ಕಚ್ಚುವುದರಿಂದ ಹರಡುತ್ತದೆ. ಹೆಚ್ಚು ಪ್ರಮಾಣದಲ್ಲಿ ಬೀದಿನಾಯಿಗಳ ಕಡಿತದಿಂದ ಸಂಬಂಧಿಸುತ್ತದೆ ಎಂದರು.
ಯಾರಿಗಾದರು ಒಂದುವೇಳೆ ನಾಯಿ ಕಚ್ಚಿದರೆ, ಆ ಜಾಗವನ್ನು ಸೋಪು ಮತ್ತು ಶುದ್ದ ಹರಿಯುವ ನಲ್ಲಿ(ನಳ) ನೀರಿನಲ್ಲಿ 15 ನಿಮೀಷ ತೊಳೆಯಬೇಕು. ಕಚ್ಚಿದ ಜಾಗಕ್ಕೆ ಸ್ಥಳೀಯವಾಗಿ ಲಭ್ಯವಿರುವ ನಂಜು ನಿರೋಧಕ ಔಷಧಿ ಲಭ್ಯವಿದ್ದರೆ ಹಚ್ಚಿರಿ. ಕಚ್ಚಿದ ಜಾಗವನ್ನು ಬ್ಯಾಂಡೇಜ್ ಅಥವಾ ಯಾವುದೇ ರೀತಿಯ ಬಟ್ಟೆಯಿಂದ ಮುಚ್ಚಬೇಡಿ. ನಾಯಿ ಕಚ್ಚಿದ ಜಾಗಕ್ಕೆ ಕೇಸರು, ಹಸುವಿನ ಸಗಣೆ, ಕಾಫಿಪುಡಿ, ಮೆಣಸಿನಪುಡಿ, ಸುಣ್ಣ ಅಥವಾ ಇತರೆ ಯವುದೇ ಕಿರಿ-ಕಿರಿ ಉಂಟುಮಾಡುವ ಪದಾರ್ಥ ಹಚ್ಚಬೇಡಿ. ಎಲ್ಲಾ ನಾಯಿಗಳಿಗೆ ಪಶು ಸಂಗೋಪನಾ ಇಲಾಖೆಯಿಂದ ನೀಡುವ ಚುಚ್ಚುಮದ್ದನ್ನು ತಪ್ಪದೇ ಹಾಕಿಸಬೇಕು. ನಾಯಿ ಅಥವಾ ಯಾವುದೇ ಪ್ರಾಣಿ ಕಡಿತವಾದಲ್ಲಿ ತಕ್ಷಣ ನಿಮ್ಮ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ನಾಯಿ ಕಡಿತದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಹಾಗೂ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬೀಸ್ ತಡೆಗಟ್ಟುವ ಲಸಿಕೆ(ಎ.ಆರ್.ವಿ) ಮತ್ತು ರೇಬಿಸ್ ಇಮ್ಯುನೊ ಗ್ಲೋಬ್ಯುಲಿನ್ (ಆರ್.ಐ.ಜಿ) ಚಿಕಿತ್ಸೆ ಉಚಿತವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಸಾರ್ವಜನಿಕರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ವಿವಿಧ ವೃಂದದ ಅಧಿಕಾರಿಗಳು, ಸಿಬ್ಬಂದಿವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್