
ಬಾಗಲಕೋಟೆ, 05 ಜೂನ್ (ಹಿ.ಸ.) :
ಆಂಕರ್ : ನೇಕಾರರ ಆರೋಗ್ಯ ರಕ್ಷಣೆ ಹಾಗೂ ಕಣ್ಣಿನ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಕೆಂಗೇರಿಮಡ್ಡಿಯ ಕೆಎಚ್ಡಿಸಿ ಉಪಕೇಂದ್ರದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ನೇಕಾರಿಕೆ ವೃತ್ತಿಯಲ್ಲಿ ನಿರಂತರವಾಗಿ ಸೂಕ್ಷ್ಮ ಕೆಲಸಗಳನ್ನು ನಿರ್ವಹಿಸುವ ನೇಕಾರರು ಕಣ್ಣಿನ ಒತ್ತಡ, ದೃಷ್ಟಿ ಸಮಸ್ಯೆ ಹಾಗೂ ಇತರೆ ನೇತ್ರ ಸಂಬಂಧಿತ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ದೃಷ್ಟಿಯಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ತಜ್ಞ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನೇಕಾರರ ಕಣ್ಣಿನ ಸಮಗ್ರ ತಪಾಸಣೆ ನಡೆಸಿ, ದೃಷ್ಟಿದೋಷ, ಕಣ್ಣಿನ ಒಣತನ, ಕಣ್ಣಿನ ಒತ್ತಡ, ವಯೋಸಹಜ ದೃಷ್ಟಿ ಸಮಸ್ಯೆಗಳು ಸೇರಿದಂತೆ ವಿವಿಧ ನೇತ್ರ ಸಂಬಂಧಿತ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಅಗತ್ಯವಿದ್ದವರಿಗೆ ಮುಂದಿನ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ನೇಕಾರರ ಆರೋಗ್ಯ ರಕ್ಷಣೆ ಕೈಮಗ್ಗ ಕ್ಷೇತ್ರದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದೆ. ಆರೋಗ್ಯವಂತ ನೇಕಾರರಿಂದಲೇ ಉತ್ತಮ ಗುಣಮಟ್ಟದ ಉತ್ಪಾದನೆ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಭಾಗವಹಿಸಿದ ನೇಕಾರರು ಉಚಿತವಾಗಿ ದೊರೆತ ಆರೋಗ್ಯ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಹಾಗೂ ಕೈಮಗ್ಗ ಕಾರ್ಮಿಕರ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕೆಎಚ್ಡಿಸಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ನೇಕಾರರ ಸಂಘದ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶಿಬಿರದ ಯಶಸ್ವಿಗೆ ಸಹಕರಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande