
ಗದಗ, 05 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಸಚಿವ ಸಂಪುಟದೊಳಗಿನ ಅಸಮಾಧಾನ ಮತ್ತು ಭಿನ್ನಮತಗಳು ಹೊರಬರುತ್ತಿರುವುದು ಸರ್ಕಾರದ ಸ್ಥಿರತೆಯ ಕುರಿತು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಆರೋಪಿಸಿದ್ದಾರೆ.
ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಮೂಲಕ ಕಾಂಗ್ರೆಸ್ ಪಕ್ಷ ಹೊಸ ರಾಜಕೀಯ ನಾಟಕಕ್ಕೆ ನಾಂದಿ ಹಾಡಿದ್ದು, ಹೊಸ ಸಚಿವ ಸಂಪುಟ ಅಧಿಕಾರ ವಹಿಸಿಕೊಂಡ ಕೇವಲ ಎರಡು ದಿನಗಳಲ್ಲೇ ಸಚಿವರ ಅಸಮಾಧಾನ ಬಹಿರಂಗವಾಗಿರುವುದು ಸರ್ಕಾರದ ಆಂತರಿಕ ವೈಫಲ್ಯವನ್ನು ಬಯಲಿಗೆಳೆಯುತ್ತಿದೆ ಎಂದು ಟೀಕಿಸಿದರು.
ಪ್ರಮಾಣವಚನ ಸ್ವೀಕರಿಸಿದ 14 ಸಚಿವರ ಪೈಕಿ ಈಗಾಗಲೇ ಮೂವರು ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ. ಇದು ಕೇವಲ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಭಿನ್ನಮತ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯಪಟ್ಟರು. ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷದ ಶಾಸಕರ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಅನೇಕ ಶಾಸಕರಲ್ಲಿ ಅಸಮಾಧಾನ ಮನೆಮಾಡಿದೆ. ಈ ಅಸಮಾಧಾನ ಮುಂದಿನ ದಿನಗಳಲ್ಲಿ ಸರ್ಕಾರದ ಕಾರ್ಯವೈಖರಿಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಈಗ ಹಲವು ಗುಂಪುಗಳು ಸಕ್ರಿಯವಾಗಿವೆ. ಹಿರಿಯರು, ಹೊಸ ಕಾಂಗ್ರೆಸ್ಸಿಗರು, ಹಳೆಯ ಕಾಂಗ್ರೆಸ್ಸಿಗರು, ವಿವಿಧ ನಾಯಕತ್ವದ ಬೆಂಬಲಿಗರು ಎಂಬಂತೆ ಪಕ್ಷದೊಳಗೆ ಹಲವು ಬಣಗಳು ನಿರ್ಮಾಣಗೊಂಡಿದ್ದು, ಇವುಗಳ ನಡುವಿನ ಸಂಘರ್ಷ ಪಕ್ಷದ ಸಂಘಟನೆಗೆ ಹಾನಿ ಉಂಟುಮಾಡಲಿದೆ ಎಂದು ಗೋವಿಂದಗೌಡ್ರ ಹೇಳಿದರು. ಪಕ್ಷದ ಆಂತರಿಕ ವೈಮನಸ್ಸು ಮತ್ತು ಅಧಿಕಾರದ ಕಿತ್ತಾಟ ಮುಂದುವರಿದರೆ ಅದು ಕಾಂಗ್ರೆಸ್ ಪಕ್ಷದ ರಾಜಕೀಯ ಪತನಕ್ಕೆ ಕಾರಣವಾಗಲಿದೆ ಎಂದು ಅವರು ಭವಿಷ್ಯ ನುಡಿದರು.
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರು ಬಿತ್ತನೆ ಕಾರ್ಯಗಳಿಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಮತ್ತು ಕೃಷಿ ಸಂಬಂಧಿತ ಸೌಲಭ್ಯಗಳನ್ನು ಒದಗಿಸುವತ್ತ ಗಮನಹರಿಸಬೇಕಾಗಿದೆ. ಆದರೆ ಆಡಳಿತದ ಕಡೆ ಗಮನಹರಿಸುವ ಬದಲು ಕಾಂಗ್ರೆಸ್ ನಾಯಕರು ಮತ್ತು ಶಾಸಕರು ಅಧಿಕಾರ ಹಂಚಿಕೆ ಹಾಗೂ ಸಚಿವ ಸ್ಥಾನಗಳ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಆಂತರಿಕ ಕಲಹಗಳಲ್ಲಿ ನಿರತರಾಗಿರುವುದು ರಾಜ್ಯದ ಕೃಷಿ ವಲಯಕ್ಕೆ ಹಾನಿಕಾರಕವಾಗಲಿದೆ. ರೈತರ ಹಿತಾಸಕ್ತಿಗಿಂತ ಅಧಿಕಾರದ ರಾಜಕೀಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಮುಂಗಾರು ಮಳೆಯ ತೀವ್ರತೆಯಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ, ರಸ್ತೆ ಹಾನಿ, ಮನೆಗಳಿಗೆ ಹಾನಿ ಹಾಗೂ ಜನ-ಜಾನುವಾರುಗಳ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳನ್ನು ಬಿಟ್ಟು ಬೆಂಗಳೂರು ಮತ್ತು ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವುದು ಖಂಡನೀಯ ಎಂದು ಅವರು ಟೀಕಿಸಿದರು.
ಮಳೆ ಸಂಬಂಧಿತ ಅನಾಹುತಗಳನ್ನು ಎದುರಿಸಲು ಸರ್ಕಾರ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳದಿದ್ದರೆ ಜನರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಯಾವುದೇ ಪ್ರಕೃತಿ ವಿಕೋಪ ಅಥವಾ ಅನಾಹುತ ಸಂಭವಿಸಿದರೆ ಅದರ ನೈತಿಕ ಹೊಣೆಗಾರಿಕೆಯನ್ನು ಸರ್ಕಾರ ಹಾಗೂ ಆಡಳಿತ ಪಕ್ಷದ ನಾಯಕರು ಹೊತ್ತುಕೊಳ್ಳಬೇಕಾಗುತ್ತದೆ ಎಂದು ಗೋವಿಂದಗೌಡ್ರ ಎಚ್ಚರಿಸಿದರು.
ರಾಜ್ಯದ ಜನರು ಅಭಿವೃದ್ಧಿ, ಸುಶಾಸನ ಮತ್ತು ಸಮಸ್ಯೆಗಳ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದ ಆರಂಭಿಕ ಬೆಳವಣಿಗೆಗಳನ್ನು ಗಮನಿಸಿದರೆ ಜನರ ನಿರೀಕ್ಷೆಗಳು ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಧಿಕಾರಕ್ಕಾಗಿ ನಡೆಯುತ್ತಿರುವ ಆಂತರಿಕ ಸಂಘರ್ಷಗಳ ನಡುವೆ ಜನಸಾಮಾನ್ಯರ ಸಮಸ್ಯೆಗಳು ಕಡೆಗಣನೆಯಾಗುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ತನ್ನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಜನಪರ ಆಡಳಿತಕ್ಕೆ ಆದ್ಯತೆ ನೀಡಬೇಕು.
ರೈತರು, ಕಾರ್ಮಿಕರು, ಯುವಕರು ಹಾಗೂ ಸಾಮಾನ್ಯ ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP