
ಬಳ್ಳಾರಿ, 05 ಜೂನ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ನಲ್ಲಿ `ನಿರುತ್ಸಾಹ' ಮನೆಮಾಡಿದ್ದರೂ `ಸಂಪುಟ ವಿಸ್ತರಣೆಗಾಗಿ' ಕುತೂಹಲಿಯಾಗಿದೆ. ಕಾಂಗ್ರೆಸ್ನ ಭದ್ರ್ರಕೋಟೆ ಆಗಿದ್ದ ಅಖಂಡ ಬಳ್ಳಾರಿ ಜಿಲ್ಲೆಯು ವಿಭಜನೆ ಆದ ಮೇಲೆ 2023 ರಲ್ಲಿ ಜಿಲ್ಲೆಯು ಮತ್ತೊಮ್ಮೆ `ಕಾಂಗ್ರೆಸ್ನ ಭದ್ರಕೋಟೆ' ಎಂದು ಸಾಬೀತುಪಡಿಸಿತ್ತು.
ಜಿಲ್ಲೆಯಲ್ಲಿ ಹಿರಿಯ ಶಾಸಕರಾಗಿರುವ ಜೆ.ಎನ್. ಗಣೇಶ್, ಬಿ.ಎಂ. ನಾಗರಾಜ್, ಯುವ ಶಾಸಕ ನಾರಾ ಭರತರೆಡ್ಡಿ ಮತ್ತು ಮಹಿಳಾ ಶಾಸಕರಾಗಿರುವ ಈ. ಅನ್ನಪೂರ್ಣ ತುಕಾರಾಂ ಅವರ ಮಧ್ಯೆ `ಸಚಿವ ಸ್ಥಾನ'ಕ್ಕಾಗಿ ತೀವ್ರ ಲಾಭಿ ನಡೆದಿದೆ. ಆದರೆ, ಬಿ. ನಾಗೇಂದ್ರ ಅವರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ `ಹಗರಣ' ಅಡ್ಡಗಾಲು ಆಗುತ್ತಿದ್ದರೂ ಪ್ರಯತ್ನ ಮುಂದುವರೆದಿದೆ.
ಕಂಪ್ಲಿ ಶಾಸಕರಾಗಿರುವ ಜೆ.ಎನ್. ಗಣೇಶ್ ಅವರು ಎರಡನೇ ಅವಧಿಗೆ ಶಾಸಕರಾಗಿದ್ದು ಸಿದ್ದರಾಮಯ್ಯ ಅವರ ಆಪ್ತರು. ಪಕ್ಷ ಮತ್ತು ತತ್ವ ನಿಷ್ಠೆ ಹೊಂದಿರುವವರು. ಕಾವೇರಿ ಹ್ಯಾಂಡ್ಲೂಮ್ ಅಧ್ಯಕ್ಷರಾಗಿ ಅನುಭವಿಗಳು. ಕ್ಷೇತ್ರದಲ್ಲಿ ಸರಳತೆ - ಸಂಪರ್ಕಗಳಿಗೆ ಜನಪ್ರಿಯರು. ಪಕ್ಷನಿಷ್ಠೆ ಮತ್ತು ತತ್ವನಿಷ್ಠೆ ಅಡಿಯಲ್ಲಿ ಸಂಸದ ಈ. ತುಕಾರಾಂ ಅವರು ಪಕ್ಷಕ್ಕಾಗಿ ಶಾಸಕ ಸ್ಥಾನವನ್ನು ಬಿಟ್ಟು, ಸಂಸದರಾದರು. ತಮ್ಮ ಹಿರಿತನ, ಉಪ ಚುನಾವಣೆಯಲ್ಲಿ ಗೆಲುವು ಮತ್ತು ಮಹಿಳಾ ಕೋಟಾದ ಅಡಿಯಲ್ಲಿ ಪತ್ನಿ ಈ. ಅನ್ನಪೂರ್ಣ ಅವರಿಗೆ ಸಚಿವ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ಧಾರೆ.
ಯುವ ನಾಯಕ, ಅಭಿವೃದ್ಧಿಯ ಉತ್ಸಾಹಿ ಆಗಿರುವ ಬಳ್ಳಾರಿ ನಗರದ ಶಾಸಕ ನಾರಾ ಭರತರೆಡ್ಡಿ ಅವರು ಕಾಂಗ್ರೆಸ್ನ ವರಿಷ್ಠರ ಆಪ್ಯಾಯತೆಗಳ ಮೂಲಕ ಯುವ ನಾಯಕತ್ವದ ಅನಿವಾರ್ಯತೆಗಳನ್ನು ಪ್ರಸ್ತಾಪ ಮಾಡಿ `ಸಚಿವ ಸ್ಥಾನ'ಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಹಾಗಂತಾ, ಬಿ. ನಾಗೇಂದ್ರ ಅವರು ಸುಮ್ಮನೆ ಕೂತಿಲ್ಲ. ತಮ್ಮ ಮೇಲಿನ ಆರೋಪಗಳನ್ನು ಎಲ್ಲವನ್ನೂ ಪಕ್ಕಕ್ಕಿರಿಸಿ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರ `ಆಶೀರ್ವಾದ'ಗಳನ್ನೇ ನಂಬಿಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ `ಬೆಂಬಲ'ವನ್ನು ಬಲವಾಗಿ ನಂಬಿದ್ದಾರೆ. ಬಿ.ಎಂ. ನಾಗರಾಜ್ ಅವರ ಪ್ರಯತ್ನಗಳು ಎಲ್ಲೂ ಸದ್ದಾಗಿ ಸುದ್ದಿಯಾಗುತ್ತಿಲ್ಲ.
ಈ ಮಧ್ಯೆ ಜಿಲ್ಲಾ ಕಾಂಗ್ರೆಸ್ನಲ್ಲಿ ಪದೋನ್ನತಿಯ ಜೊತೆಯಲ್ಲಿ ಹೊಸ ನಾಯಕತ್ವಕ್ಕಾಗಿ ಡಿ.ಕೆ. ಶಿವಕುಮಾರ್ ಅವರ ಜೊತೆಯಲ್ಲಿ ದಶಕಗಳಿಂದ ನೇರ ಸಂಪರ್ಕದಲ್ಲಿರುವ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜೆ.ಎಸ್. ಆಂಜಿನೇಯಲು ಅವರು ರಾಜ್ಯಮಟ್ಟದ `ನಿಗಮ - ಮಂಡಳಿ' ಅಧ್ಯಕ್ಷ ಸ್ಥಾನದ ಮೇಲಿ ಕಣ್ಣಿಟ್ಟಿರುವುದು ಪ್ರಚಲಿತ. ಇವರಷ್ಟೇ ಅಲ್ಲದೇ, ಡಿ.ಕೆ. ಶಿವಕುಮಾರ್ ಅವರ ಜೊತೆಯಲ್ಲಿ ಬಳ್ಳಾರಿ ಗ್ರಾಮೀಣ ಉಪ ಚುನಾವಣೆ ಸೇರಿ ಜಿಲ್ಲೆಯಲ್ಲಿ ನಡೆದ ವಿವಿಧ ಚುನಾವಣೆಗಳಲ್ಲಿ - ಪಕ್ಷದ ಸಂಘಟನೆಯಲ್ಲಿ ಶ್ರಮಿಸಿರುವ ಅನೇಕರು ರಾಜ್ಯಮಟ್ಟದ ನಿಗಮ - ಮಂಡಳಿಗಳ ಮೇಲೆ ಕಣ್ಣಿಟ್ಟಿರುವುದು ಸಹಜ.
ಆದರೆ, ಸಚಿವ ಸ್ಥಾನ - ನಿಗಮ : ಮಂಡಳಿಗಳ ಆಕಾಂಕ್ಷಿಗಳಲ್ಲಿ `ತಾಳ್ಮೆ'ಯ ಮಂತ್ರದ ಜಪ ನಡೆದಿದೆ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮತ್ತು ಯುವಶಕ್ತಿಯ ಬಲಸಂವರ್ಧನೆಗೆ ಆದ್ಯತೆ ನೀಡುತ್ತಿರುವ ಡಿ.ಕೆ. ಶಿವಕುಮಾರ್ ಅವರು ಭವಿಷ್ಯದಲ್ಲಿ ಜಿಲ್ಲೆಯ ಯಾರ್ಯಾರಿಗೆ ಯಾವ್ಯಾವ `ಹುದ್ದೆಗಳನ್ನು ; ಸ್ಥಾನಗಳನ್ನು' ನೀಡಲಿದ್ದಾರೆ ಎನ್ನುವದೇ ಯಕ್ಷ ಪ್ರಶ್ನೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್