ಆರ್ಥಿಕ ಸ್ವಾವಲಂಬನೆಯತ್ತ ಯಶಸ್ವಿ ಹೆಜ್ಜೆ
ಗದಗ, 05 ಜೂನ್ (ಹಿ.ಸ.) : ಆ್ಯಂಕರ್ : ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ಸ್ವಾವಲಂಬನೆ ಹಾಗೂ ಶಾಶ್ವತ ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಸಂಜೀವಿನಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ‘ಮತ್ಸ್ಯ ಸಂಜೀವಿನಿ’ ಯೋಜನೆಯು ಗದಗ ಜಿಲ್ಲೆಯಲ್ಲಿ ಯಶಸ್ಸಿನ ಹೊಸ ಅಧ್ಯಾಯ ಬರೆದಿದೆ. ವಿಶೇಷವಾಗಿ ಗದಗ ತಾಲೂ
ಫೋಟೋ


ಗದಗ, 05 ಜೂನ್ (ಹಿ.ಸ.) :

ಆ್ಯಂಕರ್ : ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ಸ್ವಾವಲಂಬನೆ ಹಾಗೂ ಶಾಶ್ವತ ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಸಂಜೀವಿನಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ‘ಮತ್ಸ್ಯ ಸಂಜೀವಿನಿ’ ಯೋಜನೆಯು ಗದಗ ಜಿಲ್ಲೆಯಲ್ಲಿ ಯಶಸ್ಸಿನ ಹೊಸ ಅಧ್ಯಾಯ ಬರೆದಿದೆ.

ವಿಶೇಷವಾಗಿ ಗದಗ ತಾಲೂಕಿನ ಹಾತಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಬಾಪುರ ಗ್ರಾಮದ ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಮೀನು ಸಾಕಾಣಿಕೆ ಮೂಲಕ ಉತ್ತಮ ಆದಾಯ ಗಳಿಸಿ ಜಿಲ್ಲೆಯ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಗ್ರಾಮೀಣ ಪ್ರದೇಶದ ಮಹಿಳೆಯರು ಕೇವಲ ಕುಟುಂಬದ ಜವಾಬ್ದಾರಿಗಳಿಗೆ ಸೀಮಿತರಾಗದೆ, ಉದ್ಯಮಶೀಲತೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಬಹುದು ಎಂಬುದನ್ನು ಈ ಯೋಜನೆ ಸಾಬೀತುಪಡಿಸಿದೆ. ಸಾರ್ವಜನಿಕ ಸಂಪನ್ಮೂಲಗಳ ಸಮರ್ಪಕ ಬಳಕೆ, ಸರ್ಕಾರದ ಮಾರ್ಗದರ್ಶನ ಮತ್ತು ಮಹಿಳೆಯರ ಪರಿಶ್ರಮ ಒಂದಾದಾಗ ಯಶಸ್ಸು ಹೇಗೆ ಸಾಧ್ಯ ಎಂಬುದಕ್ಕೆ ಈ ಯೋಜನೆ ಜೀವಂತ ಉದಾಹರಣೆಯಾಗಿದೆ.

ಜಿಲ್ಲೆಯಾದ್ಯಂತ ಸಂಜೀವಿನಿ ಯೋಜನೆಯಡಿ 16 ಗ್ರಾಮ ಪಂಚಾಯಿತಿ ಮಟ್ಟದ ಕೆರೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಮೂಲಕ ಗುತ್ತಿಗೆ ಪಡೆದು ಸ್ವಸಹಾಯ ಸಂಘಗಳ ಸದಸ್ಯರಿಗೆ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಮಹಿಳೆಯರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸಿ ಅವರ ಆದಾಯವನ್ನು ಹೆಚ್ಚಿಸುವುದಾಗಿದೆ.

ಹೋರಾಟದ ಬದುಕಿನಿಂದ ಸ್ವಾವಲಂಬನೆಯತ್ತ

ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಬಹುತೇಕ ಸದಸ್ಯೆಯರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅಲ್ಪ ಪ್ರಮಾಣದ ಕೃಷಿ, ಕೂಲಿ ಕೆಲಸ ಮತ್ತು ಋತುಆಧಾರಿತ ಆದಾಯದ ಮೇಲೆ ಅವಲಂಬಿತವಾಗಿದ್ದ ಈ ಕುಟುಂಬಗಳಿಗೆ ಜೀವನ ನಿರ್ವಹಣೆ ದೊಡ್ಡ ಸವಾಲಾಗಿತ್ತು. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇಂತಹ ಸಂದರ್ಭದಲ್ಲಿ ಸಂಜೀವಿನಿ ಯೋಜನೆಯಡಿ ಮಹಿಳೆಯರನ್ನು ಗುರುತಿಸಿ ಅವರಿಗೆ ಹೊಸ ಜೀವನೋಪಾಯದ ಅವಕಾಶ ಕಲ್ಪಿಸಲಾಯಿತು. ಇದರಿಂದ ಅವರ ಬದುಕಿನಲ್ಲಿ ಆಶಾಕಿರಣ ಮೂಡಿತು.

ವೈಜ್ಞಾನಿಕ ಮೀನುಗಾರಿಕೆಗೆ ವಿಶೇಷ ತರಬೇತಿ

ಮಹಿಳೆಯರಿಗೆ ಮೀನುಗಾರಿಕೆ ಕ್ಷೇತ್ರದಲ್ಲಿ ಅಗತ್ಯ ಕೌಶಲ್ಯ ಮತ್ತು ಜ್ಞಾನ ಒದಗಿಸುವ ಉದ್ದೇಶದಿಂದ 2025ರಲ್ಲಿ ಜಿಲ್ಲಾ ಪಂಚಾಯತ್ ಗದಗ ಜಿಲ್ಲಾ ಸಂಪನ್ಮೂಲ ಕೇಂದ್ರ, ಹುಲಕೋಟೆಯಲ್ಲಿ ಮೂರು ದಿನಗಳ ವಸತಿ ಸಹಿತ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ತರಬೇತಿಯನ್ನು ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ನಡೆಸಲಾಯಿತು.

ತರಬೇತಿ ವೇಳೆ ಕೆರೆ ನಿರ್ವಹಣೆ, ಮೀನು ಮರಿಗಳ ಆಯ್ಕೆ, ಆಹಾರ ನಿರ್ವಹಣೆ, ಮೀನುಗಳ ಬೆಳವಣಿಗೆ, ರೋಗ ನಿಯಂತ್ರಣ, ಕೊಯ್ಲು ವಿಧಾನಗಳು ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಮಹಿಳೆಯರು ತರಬೇತಿಯ ಮೂಲಕ ವೈಜ್ಞಾನಿಕ ಮೀನು ಸಾಕಾಣಿಕೆಯ ಬಗ್ಗೆ ಅಗತ್ಯ ಜ್ಞಾನ ಪಡೆದುಕೊಂಡರು.

ಅಮೃತ ಸರೋವರ ಕೆರೆಯಿಂದ ಆರಂಭವಾದ ಹೊಸ ಅಧ್ಯಾಯ

ತರಬೇತಿ ಪೂರ್ಣಗೊಂಡ ಬಳಿಕ ಹಾತಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರ ಯೋಜನೆಯಡಿ ನಿರ್ಮಿಸಲಾದ ಕೆರೆಯನ್ನು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟವು ನಿಯಮಾನುಸಾರ ಗುತ್ತಿಗೆ ಪಡೆದುಕೊಂಡಿತು. ನಂತರ ಒಕ್ಕೂಟ ಹಾಗೂ ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ನಡುವೆ ಒಪ್ಪಂದ ಮಾಡಿಕೊಂಡು ಮೀನುಗಾರಿಕೆ ಚಟುವಟಿಕೆಗೆ ಚಾಲನೆ ನೀಡಲಾಯಿತು.

ಮೀನುಗಾರಿಕೆ ಇಲಾಖೆಯ ತಾಂತ್ರಿಕ ಮಾರ್ಗದರ್ಶನದಡಿ ಸುಮಾರು 12 ಸಾವಿರ ಕಟ್ಲಾ ಹಾಗೂ ರೋಹು ಮೀನು ಮರಿಗಳನ್ನು ಕೆರೆಗೆ ಬಿಡಲಾಯಿತು. ಮೀನುಗಳ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಮಹಿಳೆಯರು ಅತ್ಯಂತ ಜವಾಬ್ದಾರಿಯಿಂದ ಕೈಗೊಂಡರು.

ತಾಲೂಕು ಸಂಜೀವಿನಿ ಯೋಜನೆ ಅಧಿಕಾರಿ ಸಿದ್ದು ಬಿ. ಸತ್ಯಣ್ಣವರ, ಅಶ್ವಿನಿ ಪಾಟೀಲ, ಕೃಷಿ ಸಖಿಯರು ಹಾಗೂ ಪಶು ಸಖಿಯರು ನಿರಂತರವಾಗಿ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ಮಹಿಳೆಯರು ಪ್ರತಿದಿನ ಕೆರೆಯ ನಿರ್ವಹಣೆ, ಮೀನುಗಳಿಗೆ ಆಹಾರ ಪೂರೈಕೆ, ನೀರಿನ ಗುಣಮಟ್ಟ ಪರಿಶೀಲನೆ ಹಾಗೂ ಬೆಳವಣಿಗೆಯ ಮೇಲ್ವಿಚಾರಣೆ ಕಾರ್ಯಗಳನ್ನು ನಿರ್ವಹಿಸಿದರು.

ಪರಿಶ್ರಮಕ್ಕೆ ಸಿಕ್ಕ ಯಶಸ್ಸಿನ ಫಲ

ಸುಮಾರು ಎಂಟು ರಿಂದ ಒಂಬತ್ತು ತಿಂಗಳ ನಿರಂತರ ಪರಿಶ್ರಮದ ನಂತರ ಕೆರೆಯಲ್ಲಿ ಬೆಳೆದ ಮೀನುಗಳನ್ನು ಕೊಯ್ಲು ಮಾಡಲಾಯಿತು. ಮೊದಲ ಹಂತದಲ್ಲಿಯೇ ಸುಮಾರು 60 ಕೆ.ಜಿ. ಮೀನುಗಳನ್ನು ಸಂಗ್ರಹಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 65 ರೂಪಾಯಿ ದರದಲ್ಲಿ ಮಾರಾಟ ಮಾಡಲಾಯಿತು.

ಕೊಯ್ಲು ಮಾಡಿದ ಮೀನುಗಳ ತೂಕ ಸರಾಸರಿ 700 ಗ್ರಾಂನಿಂದ 1 ಕೆ.ಜಿ.ವರೆಗೆ ಇತ್ತು. ಮೀನುಗಳ ಮಾರಾಟದಿಂದ ಬಂದ ಆದಾಯ ಮಹಿಳೆಯರ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಉತ್ಪಾದನೆ ಮಾಡುವ ಮೂಲಕ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ವಿಶ್ವಾಸವನ್ನು ಮಹಿಳೆಯರು ವ್ಯಕ್ತಪಡಿಸಿದ್ದಾರೆ.

ಆತ್ಮವಿಶ್ವಾಸ ಹೆಚ್ಚಿಸಿದ ಯೋಜನೆ

ಮತ್ಸ್ಯ ಸಂಜೀವಿನಿ ಯೋಜನೆ ಕೇವಲ ಆದಾಯ ಗಳಿಕೆಯ ಮಾರ್ಗವಾಗಿಯೇ ಉಳಿಯದೆ ಮಹಿಳೆಯರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸ್ವಾವಲಂಬನೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಿದೆ. ಈ ಯೋಜನೆಯ ಮೂಲಕ ಮಹಿಳೆಯರು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದು, ಕುಟುಂಬ ಹಾಗೂ ಸಮಾಜದಲ್ಲಿ ಗೌರವದ ಸ್ಥಾನವನ್ನು ಗಳಿಸಿದ್ದಾರೆ.

ಸಾರ್ವಜನಿಕ ಸಂಪನ್ಮೂಲವಾಗಿದ್ದ ಕೆರೆಯನ್ನು ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಬಳಸಿಕೊಂಡಿರುವುದು ಗ್ರಾಮೀಣ ಅಭಿವೃದ್ಧಿಯ ಅತ್ಯುತ್ತಮ ಮಾದರಿಯಾಗಿದೆ. ಮಹಿಳೆಯರ ಒಗ್ಗಟ್ಟು, ಪರಿಶ್ರಮ ಮತ್ತು ಬದ್ಧತೆಯ ಫಲವಾಗಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.

ಅಧಿಕಾರಿಗಳ ನಿರಂತರ ಮಾರ್ಗದರ್ಶನ

ಯೋಜನೆಯ ಯಶಸ್ಸಿನ ಹಿಂದೆ ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಾಗರಾಜ್ ಚಳ್ಳಜ್ಜಿಮನೆ, ಜಿಲ್ಲಾ ಪಂಚಾಯಿತಿ ವ್ಯವಸ್ಥಾಪಕರು (ಕೃಷಿ) ಮಡ್ಡೆಪ್ಪ ಮಲ್ಲಿಮಾರ್ ಹಾಗೂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಿದ್ದು ಬಿ. ಸತ್ಯಣ್ಣವರ ಅವರ ನಿರಂತರ ಮಾರ್ಗದರ್ಶನ ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸಿದೆ.

ಯೋಜನೆಯ ಪ್ರತಿಯೊಂದು ಹಂತದಲ್ಲೂ ಅಧಿಕಾರಿಗಳು ಅಗತ್ಯ ಮಾಹಿತಿ, ತಾಂತ್ರಿಕ ಸಲಹೆ ಹಾಗೂ ಪ್ರೋತ್ಸಾಹ ನೀಡಿರುವುದರಿಂದ ಮಹಿಳೆಯರು ಆತ್ಮವಿಶ್ವಾಸದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿದೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

ಫಲಾನುಭವಿಯ ಸಂತಸದ ನುಡಿ

ಹಿಂದೆ ನಮ್ಮ ಕುಟುಂಬದ ಆದಾಯ ತುಂಬಾ ಕಡಿಮೆಯಾಗಿತ್ತು. ಸಂಜೀವಿನಿ ಯೋಜನೆಯಡಿ ದೊರೆತ ತರಬೇತಿ ಮತ್ತು ಅವಕಾಶದಿಂದ ಮೀನುಗಾರಿಕೆಯನ್ನು ಕಲಿತು ಇಂದು ಸ್ವಂತ ಆದಾಯ ಗಳಿಸುತ್ತಿದ್ದೇವೆ. ನಮ್ಮ ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಅಗತ್ಯಗಳನ್ನು ಆತ್ಮವಿಶ್ವಾಸದಿಂದ ಪೂರೈಸುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಮತ್ಸ್ಯ ಸಂಜೀವಿನಿ ಯೋಜನೆ ಹೊಸ ಬೆಳಕು ತಂದಿದೆ. ಎಂದು ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಶಿವಲೀಲಾ ಹರಿಜನ ಸಂತಸ ವ್ಯಕ್ತಪಡಿಸಿದರು.

ಮಹಿಳಾ ಸಬಲೀಕರಣದ ಯಶೋಗಾಥೆ

ಗ್ರಾಮೀಣ ಮಹಿಳೆಯರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಆರಂಭವಾದ ಮತ್ಸ್ಯ ಸಂಜೀವಿನಿ ಯೋಜನೆ

ಗದಗ ಜಿಲ್ಲೆಯಲ್ಲಿ ಮಹಿಳಾ ಸಬಲೀಕರಣದ ಯಶಸ್ವಿ ಮಾದರಿಯಾಗಿ ಹೊರಹೊಮ್ಮಿದೆ. ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಗೌರವ ಮತ್ತು ಉದ್ಯಮಶೀಲತೆಯ ಬೆಳವಣಿಗೆಗೆ ಈ ಯೋಜನೆ ಮಹತ್ವದ ಕೊಡುಗೆ ನೀಡುತ್ತಿದೆ.

ಸರ್ಕಾರದ ಯೋಜನೆಗಳು ಸಮರ್ಪಕ ಮಾರ್ಗದರ್ಶನ ಮತ್ತು ಫಲಾನುಭವಿಗಳ ಪರಿಶ್ರಮದೊಂದಿಗೆ ಅನುಷ್ಠಾನಗೊಂಡರೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೇಗೆ ನೆರವಾಗುತ್ತವೆ ಎಂಬುದಕ್ಕೆ ಗದಗ ಜಿಲ್ಲೆಯ ಮತ್ಸ್ಯ ಸಂಜೀವಿನಿ ಯೋಜನೆ ಅತ್ಯುತ್ತಮ ಉದಾಹರಣೆಯಾಗಿದೆ.

ಮಹಿಳೆಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿರುವ ಈ ಯೋಜನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗುವ ನಿರೀಕ್ಷೆ ಇದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande