



ಹೊಸಪೇಟೆ, 05 ಜೂನ್ (ಹಿ.ಸ.) :
ಆ್ಯಂಕರ್ : ಸಸಿ ನೆಡುವುದು ಕೇವಲ ಒಂದು ದಿನದ ಆಚರಣೆಯಾಗಬಾರದು. ಅದು ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣ, ಪಶು-ಪಕ್ಷಿಗಳು ಮತ್ತು ಗಿಡಮರಗಳು ಸಮೃದ್ಧವಾಗಿದ್ದರೆ ಮಾತ್ರ ಮನುಕುಲದ ಪ್ರಗತಿ ಸಾಧ್ಯ. ಇಲ್ಲದಿದ್ದರೆ ಇಡೀ ಜೀವಸಂಕುಲವೇ ನಾಶವಾಗಿ ಇಡೀ ಭೂಮಿ ಮರುಭೂಮಿಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ ವತಿಯಿಂದ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಅಮ್ಮನಿಗಾಗಿ ಒಂದು ಗಿಡ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಕೃಷಿ ಸಚಿವ ಶಿವರಾಜ್ಸಿಂಗ್ ಚೌಹಾಣ್ ಅವರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಪ್ರತಿದಿನ ನಿಯಮಿತವಾಗಿ ಒಂದು ಸಸಿ ನೆಡುವ ಪರಿಸರ ಪ್ರಜ್ಞೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಕೃಷಿಯಿಂದ ವಿಮುಖರಾಗುತ್ತಿರುವ ಯುವ ಪೀಳಿಗೆಯನ್ನು ಮರಳಿ ಕೃಷಿಯತ್ತ ಸೆಳೆಯಲು ಮತ್ತು ಗ್ರಾಮೀಣ ಭಾಗದ ಆರ್ಥಿಕತೆ ಬಲಪಡಿಸಲು ಮಲ್ಟಿ ಕ್ರಾಪಿಂಗ್ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಗಳು ಅತ್ಯಂತ ಅವಶ್ಯಕವಾಗಿವೆ ಎಂದರು.
ಹಿಂದೆ ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕಂಪದ ದುರಂತದಲ್ಲಿ ಮಡಿದ ಅಮಾಯಕ ಮಕ್ಕಳ ನೆನಪಿಗಾಗಿ ಡಾ. ನಾಯರ್ ಅವರು ಭಾರತದ ಕಚ್ ಪ್ರದೇಶದಲ್ಲಿ ಅತ್ಯಂತ ದೊಡ್ಡದಾದ ಮಿಯಾವಾಕಿ ಮಾದರಿಯ ದಟ್ಟ ಅರಣ್ಯ ನಿರ್ಮಿಸಿರುವುದು ಶ್ಲಾಘನೀಯ. ಅದೇ ಮಾದರಿಯಲ್ಲಿ ಚಿಕ್ಕಜೋಗಿಹಳ್ಳಿಯಲ್ಲೂ ಸ್ಥಳೀಯ ಹವಾಮಾನಕ್ಕೆ ಹೊಂದುವ ವೈವಿಧ್ಯಮಯ ಸಸಿಗಳನ್ನು ವೈಜ್ಞಾನಿಕ ಪದ್ಧತಿಯಲ್ಲಿ ನೆಡಲಾಗುತ್ತಿದೆ. ಇದು ಅತ್ಯಂತ ಕಡಿಮೆ ಅವಧಿಯಲ್ಲಿ ದಟ್ಟವಾದ ಕಾಡಾಗಿ ಪರಿವರ್ತನೆಗೊಳ್ಳಲಿದ್ದು, ಮುಂದಿನ 50 ವರ್ಷಗಳ ಕಾಲ ಈ ಭಾಗದ ತಾಯಂದಿರ ನೆನಪನ್ನು ಜೀವಂತವಾಗಿರಿಸಲಿದೆ. ಆದ್ದರಿಂದ ಗಿಡ ನೆಟ್ಟ ಪ್ರತಿಯೊಂದು ಮಗುವಿನ ಹೆಸರನ್ನು ಕಲ್ಲಿನ ಫಲಕದ ಮೇಲೆ ಕೆತ್ತಿ ಆಯಾ ಗಿಡದ ಪಕ್ಕದಲ್ಲಿ ಅಳವಡಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದರು.
ಕೂಡ್ಲಿಗಿ ತಾಲ್ಲೂಕಿನಲ್ಲಿ ಜಲಮೂಲ ವೃದ್ಧಿಸಲು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆಗಳನ್ನು ಅಭಿವೃದ್ಧಿಪಡಿಸುವ ಜಲಸಂರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಪ್ರೇರಿತರಾದ ಸ್ಥಳೀಯ ರೈತರೊಬ್ಬರು ತಮ್ಮ ಸ್ವಂತ ಜಮೀನನ್ನು ಈ ಹಸಿರು ಯೋಜನೆಯೊಂದಿಗೆ ಜೋಡಿಸಲು ಮುಂದೆ ಬಂದಿರುವುದು ಶ್ಲಾಘನೀಯ. ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಅನಿರುದ್ಧ್ ಶ್ರವಣ್ ಅವರ ಅಭಿವೃದ್ಧಿ ಬದ್ಧತೆ ಹಾಗೂ ಈಗಿನ ಜಿಲ್ಲಾಧಿಕಾರಿ ಕವಿತಾ ಅವರ ಸಕ್ರಿಯ ಸಹಕಾರಕ್ಕೆ ಸಚಿವೆ ನಿರ್ಮಲ ಸೀತಾರಾಮನ್ ಮುಕ್ತ ಕಂಠದಿಂದ ಪ್ರಶಂಸಿದ ಅವರು, ಚಿಕ್ಕಜೋಗಿಹಳ್ಳಿಯ ರೈತ ಬಾಂಧವರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಶ್ರಮಿಸಿದರೆ ಈ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದ ಹಸಿರು ಮತ್ತು ಸಮೃದ್ಧಿಯ ವೈಭವ ಮತ್ತೆ ಮರುಕಳಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಕೇಂದ್ರ ವಿತ್ತ ಸಚಿವರ ಮಾರ್ಗದರ್ಶನದಲ್ಲಿ ಈಗಾಗಲೇ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ 300 ಎಕರೆ ಪ್ರದೇಶದಲ್ಲಿ ಮಿಯಾವಾಕಿ ಮಾದರಿಯ ದಟ್ಟ ಕಾಡು ಬೆಳೆಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಇದನ್ನು 1,000 ಎಕರೆಗೆ ವಿಸ್ತರಿಸುವ ಗುರಿ ಇದೆ. ಗಿಡ ನೆಟ್ಟ ಪ್ರತಿಯೊಂದು ಮಗುವಿನ ಹೆಸರನ್ನು ಕಲ್ಲಿನ ಫಲಕದ ಮೇಲೆ ಕೆತ್ತಿ ಆಯಾ ಗಿಡದ ಪಕ್ಕದಲ್ಲಿ ಇಡಲು ಸಚಿವರು ಸೂಚಿಸಿದ್ದು, ಇದು ಪರಿಸರ ಕಾಳಜಿಗೆ ಹೊಸ ಇತಿಹಾಸ ಬರೆಯಲಿದೆ ಎಂದರು.
ಇದರೊಂದಿಗೆ ತಾಲೂಕಿಗೆ ಕೃಷಿ ವಿಜ್ಞಾನ ಕೇಂದ್ರ ಮಂಜೂರಾಗಿದ್ದು, ಅದಕ್ಕಾಗಿ ಕೂಡ್ಲಿಗಿ ಬಳಿ 50 ಎಕರೆ ಜಮೀನು ಕಾಯ್ದಿರಿಸಲಾಗಿದೆ. ರೈತರಿಗಾಗಿ ಹುಣಸೆಹಣ್ಣು ಸಂಸ್ಕರಣಾ ಘಟಕವೂ ಬರಲಿದೆ. ಗ್ರಾಮದಲ್ಲಿ ಎಲ್ಕೆಜಿಯಿಂದ ಪಿಯುಸಿವರೆಗಿನ ಸಮಗ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಎಸ್ಟಿ ಹೆಣ್ಣು ಮಕ್ಕಳ ಮೆಟ್ರಿಕ್ ನಂತರದ ವಸತಿ ನಿಲಯ ಮಂಜೂರಾಗಿದೆ. ಜೊತೆಗೆ ಏಕಲವ್ಯ ಮಾದರಿ ವಸತಿ ಶಾಲೆ ಸ್ಥಾಪನೆಗೆ ಕೇಂದ್ರದ ಅಂತಿಮ ಅನುಮೋದನೆ ಬಾಕಿ ಇದೆ ಎಂದರು. ಈ ಮೂಲಕ ತಾಲ್ಲೂಕು ಶೈಕ್ಷಣಿಕವಾಗಿ ಪ್ರಗತಿ ಕಾಣಲಿದೆ ಎಂದರು.
ಪರಸರ ಪ್ರೇಮಿ ಆರ್.ಕೆ.ನಾಯರ್ ಮಾತನಾಡಿ, ವಿಶ್ವ ಪರಿಸರ ದಿನದ ಅಂಗವಾಗಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದ ಅಮ್ಮನಿಗಾಗಿ ಒಂದು ಗಿಡ ಯೋಜನೆ ಅಡಿಯಲ್ಲಿ ಭಾರತ ವನದ ವರ್ಟಿಕಲ್ ಆರ್ಗಾನಿಕ್ ಹಾರ್ಟಿಕಲ್ಚರ್ (ಸಾವಯವ ತೋಟಗಾರಿಕೆ) ಯೋಜನೆಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
40 ಎಕರೆಯಲ್ಲಿ 1 ಲಕ್ಷ ಗಿಡಗಳ ಸಂಕಲ್ಪ:
ಈ ಮಹತ್ವಾಕಾಂಕ್ಷಿ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 1 ಲಕ್ಷ ಹಣ್ಣಿನ ಗಿಡ ನೆಡುವ ಗುರಿ ಹೊಂದಲಾಗಿದೆ. ಪ್ರಸ್ತುತ ಮೊದಲ ಹಂತದಲ್ಲಿ 40 ಎಕರೆ ಜಾಗದಲ್ಲಿ 15,000 ಸಸಿ ನೆಡುವ ಕಾರ್ಯ ಆರಂಭವಾಗಿದ್ದು, ಈ ವರ್ಷದ ಅಂತ್ಯಕ್ಕೆ 50 ಸಾವಿರ ಹಾಗೂ ಮುಂದಿನ ವರ್ಷದಲ್ಲಿ 50 ಸಾವಿರ ಸಸಿ ನೆಡುವ ಮೂಲಕ ಒಟ್ಟು 1 ಲಕ್ಷ ಸಸಿ ನೆಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 1,000 ಶಾಲಾ ಮಕ್ಕಳು ಅತ್ಯಂತ ಉತ್ಸಾಹದಿಂದ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು.
ಜಪಾನ್ ತಂತ್ರಜ್ಞಾನ ಹಾಗೂ ಮಲ್ಟಿ ಕ್ರಾಪಿಂಗ್ ಕೃಷಿ :
ಈ ಯೋಜನೆ ಕೇವಲ ಗಿಡ ನೆಡುವುದಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಜಪಾನ್ ದೇಶದ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡು, ಒಂಬತ್ತು ವಿಭಿನ್ನ ತಳಿಯ ಕಸಿ ಮಾಡಿದ ಹಣ್ಣಿನ ಗಿಡಗಳನ್ನು ವೈಜ್ಞಾನಿಕವಾಗಿ ನೆಡುವ ಮಲ್ಟಿ ಕ್ರಾಪಿಂಗ್ ಸಿಸ್ಟಮ್ ಇಲ್ಲಿ ಪರಿಚಯಿಸಲಾಗಿದೆ. ದೊಡ್ಡ ಜಮೀನು ಇರುವ ರೈತರಿಗೆ ನೀರಾವರಿ ಜೊತೆಗೆ ಉಪ ಕಸುಬಾಗಿ ಮೀನುಗಾರಿಕೆ ಮಾಡಲು ಸಣ್ಣ ಹೊಂಡಗಳನ್ನೂ ಸಹ ನಿರ್ಮಿಸಿಕೊಡಲಾಗುತ್ತಿದೆ. ಇಡೀ ಯೋಜನೆಗೆ ಸಿಎಸ್ಆರ್ ನಿಧಿಯಿಂದ ಸುಮಾರು 3 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಇದರಲ್ಲಿ ಚೈನ್ ಲಿಂಕ್ ಫೆನ್ಸಿಂಗ್, ಜಮೀನು ಸಿದ್ಧತೆ ಹಾಗೂ 5 ವರ್ಷಗಳ ನಿರ್ವಹಣೆಯ ವೆಚ್ಚವೂ ಸೇರಿದೆ.
ಈ ಯೋಜನೆಯಲ್ಲಿ ಕೃಷಿಕರಿಂದ ಯಾವುದೇ ಸಂಸ್ಥೆಯಾಗಲಿ ಅಥವಾ ಸರ್ಕಾರವಾಗಲಿ ಒಂದು ರೂಪಾಯಿಯನ್ನೂ ಪಡೆಯುವುದಿಲ್ಲ. ರೈತರು ಕೇವಲ ತಮ್ಮ ಜಮೀನನ್ನು ತೋಟಗಾರಿಕೆ ಇಲಾಖೆಯ ಮೂಲಕ ಯೋಜನೆಗೆ ಒಳಪಡಿಸಿ, ತನು-ಮನದಿಂದ ಗಿಡಗಳನ್ನು ಪೋಷಿಸಬೇಕಿದೆ. ಕಡಿಮೆ ನಿರ್ವಹಣೆ ಬೇಡುವ ನಿಂಬೆ, ಬೇಲದ ಹಣ್ಣಿನಂತಹ ಗಿಡ ಇಲ್ಲಿ ನೆಡಲಾಗುತ್ತಿದ್ದು, 2 ವರ್ಷಗಳ ನಂತರ ಫಲ ಸಿಗಲು ಆರಂಭವಾಗಿ, 3ನೇ ವರ್ಷದಿಂದ ರೈತರ ಕೈಗೆ ನೇರ ಆದಾಯ ಬರಲಿದೆ. ಹಣ್ಣುಗಳಿಂದ ಬರುವ ಶೇ. 100 ರಷ್ಟು ಲಾಭವೂ ನೇರವಾಗಿ ರೈತರ ಖಾತೆಗೆ ಸೇರಲಿದೆ.
ಮುಂದಿನ ದಿನಗಳಲ್ಲಿ ಇಲ್ಲಿ ಬೆಳೆಯುವ ಹಣ್ಣುಗಳನ್ನು ಸಂಸ್ಕರಿಸಲು ಪಲ್ಪ್ ಮತ್ತು ಜ್ಯೂಸ್ ಫ್ಯಾಕ್ಟರಿಗಳನ್ನು ಸ್ಥಾಪಿಸಲು ಬೆಂಬಲ ನೀಡಲಾಗುವುದು. ಜೊತೆಗೆ ದೇಶ-ವಿದೇಶಗಳ ದೊಡ್ಡ ವ್ಯಾಪಾರಿಗಳನ್ನು ನೇರವಾಗಿ ಚಿಕ್ಕಜೋಗಿಹಳ್ಳಿಗೆ ಆಹ್ವಾನಿಸಿ ಕಂಟೈನರ್ ಮೂಲಕ ರಫ್ತು ಮಾಡುವ ವ್ಯವಸ್ಥೆಯನ್ನೂ ಸಹ ಕಲ್ಪಿಸಿ ಕೊಡಲಾಗುವುದು. ಇದರಿಂದ ರೈತರ ಮಕ್ಕಳು ಬೆಂಗಳೂರು ಅಥವಾ ವಿದೇಶಗಳಿಗೆ ವಲಸೆ ಹೋಗುವುದು ತಪ್ಪಲಿದೆ. ಈ ಯೋಜನೆ ಇಡೀ ದೇಶಕ್ಕೆ ಒಂದು ರೋಲ್ ಮಾಡೆಲ್ ಆಗಲಿದೆ ಎಂದರು.
ಈ ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚೀಫ್ ಜನರಲ್ ಮ್ಯಾನೇಜರ್ ಜೂಲಿ ಸ್ಮಿತಾ ಸಿನ್ಹಾ, ಎಸ್ಟಿಎಂಸಿಎಲ್ ವ್ಯವಸ್ಥಾಪಕ ನಿರ್ದೇಶಕ ವಿಜಯರಂಜನ್ ಸಿಂಗ್, ವಿತ್ತ ಸಚಿವರ ಆಪ್ತ ಕಾರ್ಯದರ್ಶಿ ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಯ್ ಮಹ್ಮದ್ ಅಲಿ ಅಕ್ರಂ ಷಾ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಅನುಪಮಾ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್