ಆರ್.ಸಿ.ಬಿ ಸಂಭ್ರಮಾಚರಣೆ ವೇಳೆ ಸಂಚಾರ ನಿಯಮ ಉಲ್ಲಂಘನೆ ; 11 ವಾಹನ ಜಪ್ತಿ, ಇಬ್ಬರ ವಿರುದ್ಧ ಪ್ರಕರಣ
ಅಧಿಕಾ ರಿ ಗಳು
Dand


ಬಾಗಲಕೋಟೆ, 05 ಜೂನ್ (ಹಿ.ಸ.) :

ಆಂಕರ್ : ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌.ಸಿ.ಬಿ) ತಂಡದ ಗೆಲುವಿನ ಸಂಭ್ರಮಾಚರಣೆಯ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದವರ ವಿರುದ್ಧ ಬಾಗಲಕೋಟೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 11 ವಾಹನಗಳನ್ನು ಜಪ್ತಿ ಮಾಡಿಕೊಂಡು ದಂಡ ವಿಧಿಸಲಾಗಿದ್ದು, ಗಲಾಟೆ ನಡೆಸಿದ ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಮೇ 31ರ ತಡರಾತ್ರಿ ಬಾಗಲಕೋಟೆ ನಗರದ ವಿದ್ಯಾಗಿರಿ ಪ್ರದೇಶದಲ್ಲಿ ಆರ್‌.ಸಿ.ಬಿ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿ ಸಂಭ್ರಮಾಚರಣೆ ನಡೆಸಿದ್ದರು. ಈ ವೇಳೆ ಕೆಲ ಯುವಕರು ಬೈಕ್ಗಳನ್ನು ಅತಿ ವೇಗವಾಗಿ ಹಾಗೂ ಅಡ್ಡಾದಿಡ್ಡಿಯಾಗಿ ಚಲಾಯಿಸುವ ಮೂಲಕ ಸಂಚಾರ ವ್ಯವಸ್ಥೆಗೆ ಅಡ್ಡಿಪಡಿಸಿದ್ದರು. ಕೆಲವರು ವಾಹನಗಳ ಸೈಲೆನ್ಸರ್ಗಳನ್ನು ಮಾರ್ಪಡಿಸಿ ಕರ್ಕಶ ಶಬ್ದ ಮಾಡಿದ್ದಲ್ಲದೇ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ತೀವ್ರ ಕಿರಿಕಿರಿ ಉಂಟುಮಾಡಿದ್ದರು ಎಂದು ತಿಳಿದುಬಂದಿದೆ.

ಸ್ಥಳದಲ್ಲಿದ್ದ ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದರೂ ಕೆಲವರು ನಿಯಮಗಳನ್ನು ಪಾಲಿಸಲು ಮುಂದಾಗಿರಲಿಲ್ಲ. ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರ ಶಿಸ್ತು ಕಾಪಾಡುವ ದೃಷ್ಟಿಯಿಂದ ಪೊಲೀಸರು ಸ್ಥಳದಲ್ಲೇ ವಾಹನಗಳ ಚಿತ್ರಗಳು ಹಾಗೂ ವಿಡಿಯೊಗಳನ್ನು ಸಂಗ್ರಹಿಸಿ ಸಾಕ್ಷ್ಯಗಳನ್ನು ದಾಖಲಿಸಿಕೊಂಡಿದ್ದರು.

ನಂತರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ನಿಯಮ ಉಲ್ಲಂಘನೆ ಮಾಡಿದ್ದ ವಾಹನಗಳ ಮಾಹಿತಿಯನ್ನು ಆಧರಿಸಿ ಸೋಮವಾರ ಬೆಳಿಗ್ಗೆಯಿಂದಲೇ ವಾಹನಗಳನ್ನು ಪತ್ತೆಹಚ್ಚುವ ಕಾರ್ಯ ಆರಂಭಿಸಿದರು. ಕಾರ್ಯಾಚರಣೆಯಲ್ಲಿ ಒಟ್ಟು 11 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಪಟ್ಟ ವಾಹನ ಸವಾರರಿಗೆ ದಂಡ ವಿಧಿಸಲಾಗಿದೆ.

ಇದರ ಜೊತೆಗೆ ಸಂಭ್ರಮಾಚರಣೆ ವೇಳೆ ಗಲಾಟೆ ನಡೆಸಿ ಸಾರ್ವಜನಿಕ ಶಾಂತಿ ಕದಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ರೀತಿಯ ವರ್ತನೆಯನ್ನು ಸಹಿಸಲಾಗುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಆರ್ಸಿಬಿ ಗೆಲುವಿನ ಸಂಭ್ರಮವನ್ನು ಅಭಿಮಾನಿಗಳು ಶಾಂತಿಯುತವಾಗಿ ಆಚರಿಸುವುದು ಸ್ವಾಗತಾರ್ಹವಾದರೂ, ಸಂಚಾರ ನಿಯಮ ಉಲ್ಲಂಘನೆ, ಅತಿವೇಗದ ಚಾಲನೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವುದು ದಂಡನೀಯ ಅಪರಾಧವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಮುಂದೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ನಗರದಲ್ಲಿ ಸಂಚಾರ ಸುರಕ್ಷತೆ ಮತ್ತು ಸಾರ್ವಜನಿಕ ನೆಮ್ಮದಿ ಕಾಪಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ವಿಶೇಷ ತಪಾಸಣೆ ಹಾಗೂ ನಿಗಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande