
ಬಾಗಲಕೋಟೆ, 04 ಜೂನ್ (ಹಿ.ಸ.) :
ಆಂಕರ್ : ಸಾರ್ವಜನಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಡೆಸಿದ ಜನಪರ ಹೋರಾಟಕ್ಕೆ ಮಹತ್ವದ ಯಶಸ್ಸು ದೊರೆತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಭಾಗದಲ್ಲಿ ನಡೆದಿದೆ.
ಹೊಸೂರು ಶಾಲೆ ಮನೆ ಸಮೀಪದ ಸರ್ವಿಸ್ ರಸ್ತೆ ಕಾಮಗಾರಿ ಹಲವು ವರ್ಷಗಳಿಂದ ವಿಳಂಬವಾಗುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಧ್ವನಿ ಎತ್ತಲಾಗಿದ್ದು, ಇದೀಗ ಇಲಾಖೆ ಗುತ್ತಿಗೆದಾರನಿಗೆ ಅಂತಿಮ ನೋಟೀಸ್ ಜಾರಿ ಮಾಡುವ ಮೂಲಕ ಕ್ರಮ ಕೈಗೊಂಡಿದೆ.
ಹೊಸೂರು ಶಾಲೆ ಮನೆ ಹತ್ತಿರದ ಸರ್ವಿಸ್ ರಸ್ತೆ ಕಾಮಗಾರಿ ಸುಮಾರು ಮೂರು ವರ್ಷಗಳಿಂದ ಅಪೂರ್ಣವಾಗಿರುವುದರಿಂದ ಸ್ಥಳೀಯ ನಿವಾಸಿಗಳು, ರೈತರು ಹಾಗೂ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ರಸ್ತೆ ಹದಗೆಟ್ಟ ಪರಿಣಾಮ ಸಂಚಾರ ದುಸ್ತರವಾಗಿದ್ದು, ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿತ್ತು. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಲಾಗಿದ್ದರೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೋರಾಟ ಆರಂಭಿಸಿದ್ದರು.
ದಿನಾಂಕ 22-05-2026 ರಂದು ರಸ್ತೆ ಸಮಸ್ಯೆಯನ್ನು ಬಿಂಬಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೊ ಪ್ರಸಾರ ಮಾಡಲಾಗಿತ್ತು. ಈ ವಿಡಿಯೊದಲ್ಲಿ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರನ ವಿಳಂಬ ಧೋರಣೆ ಕುರಿತು ವಿವರವಾಗಿ ಪ್ರಸ್ತಾಪಿಸಲಾಗಿತ್ತು. ಈ ವಿಡಿಯೊ ವ್ಯಾಪಕ ಗಮನ ಸೆಳೆದಿದ್ದು, ಬಳಿಕ ಇಲಾಖೆಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗುತ್ತಿಗೆದಾರನಿಗೆ ಜಾರಿ ಮಾಡಿರುವ ನೋಟೀಸ್ನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡ ವಿಡಿಯೊವನ್ನು ಉಲ್ಲೇಖಿಸಿರುವುದು ವಿಶೇಷವಾಗಿದೆ. ನೋಟೀಸ್ನಲ್ಲಿ ಕಾಮಗಾರಿ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ಹಲವು ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸದೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಇನ್ನೂ 15 ದಿನಗಳೊಳಗೆ ಬಾಕಿ ಉಳಿದಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಪ್ಪುಪಟ್ಟಿಗೆ
ಸೇರಿಸಲು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ನೋಟೀಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಬೆಳವಣಿಗೆಗೆ ಸ್ಥಳೀಯ ನಿವಾಸಿಗಳು ಹಾಗೂ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತ ಕ್ರಮ ಕೈಗೊಂಡ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿರುವ ಅವರು, ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯುವವರೆಗೂ ತಮ್ಮ ನಿಗಾ ಮತ್ತು ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande