
ವಿಜಯಪುರ, 04 ಜೂನ್ (ಹಿ.ಸ.) :
ಆಂಕರ್ : ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಪ್ರಾಮಾಣಿಕ, ನಿಷ್ಪಕ್ಷಪಾತ ಹಾಗೂ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಹಿರಿಯ ಪತ್ರಕರ್ತ ದೀಪಕ್ ಶಿಂತ್ರೆ ಅವರಿಗೆ ಸೊಲಾಪುರದ ಸ್ಟಾರ್ ನ್ಯೂಸ್ ಚಾನೆಲ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಪತ್ರಕರ್ತ ಭೂಷಣ” ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಪತ್ರಿಕೋದ್ಯಮವನ್ನು ಕೇವಲ ವೃತ್ತಿಯನ್ನಾಗಿ ಮಾತ್ರವಲ್ಲದೆ ಸಮಾಜ ಸೇವೆಯ ಮಾಧ್ಯಮವಾಗಿಯೂ ಪರಿಗಣಿಸಿ ಕಾರ್ಯನಿರ್ವಹಿಸಿರುವ ದೀಪಕ್ ಶಿಂತ್ರೆ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದ ಜನರ ಸಮಸ್ಯೆಗಳು, ಸಾಮಾಜಿಕ ಬೆಳವಣಿಗೆಗಳು, ರಾಜಕೀಯ ವಿದ್ಯಮಾನಗಳು, ಶೈಕ್ಷಣಿಕ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ನಿರಂತರವಾಗಿ ಬೆಳಕಿಗೆ ತರುವ ಮೂಲಕ ವಿಶೇಷ ಗುರುತಿಸಿಕೊಂಡಿದ್ದಾರೆ.
ಮೂಲತಃ ಮರಾಠಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅವರು, ಹಲವು ಮರಾಠಿ ದಿನಪತ್ರಿಕೆಗಳಿಗೆ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕ ರಾಜ್ಯದ ಜನಜೀವನ, ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಪರಿಣಾಮಕಾರಿಯಾಗಿ ವರದಿ ಮಾಡಿದ್ದಾರೆ. ಕನ್ನಡ ನಾಡಿನಲ್ಲಿ ವಾಸವಾಗಿದ್ದರೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕರ್ನಾಟಕದ ಸ್ವಾಭಿಮಾನಕ್ಕೆ ಸದಾ ಗೌರವ ನೀಡುತ್ತಾ ಪತ್ರಿಕೋದ್ಯಮ ನಡೆಸಿರುವುದು ಅವರ ವಿಶೇಷತೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ಮೆಚ್ಚುಗೆ ವ್ಯಕ್ತಪಡಿಸಿದೆ.
ವಿಶೇಷವಾಗಿ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಸೂಕ್ಷ್ಮ ಹಾಗೂ ಸಂವೇದನಾಶೀಲ ವಿಚಾರಗಳು, ಭಾಷಾ ಸಂಬಂಧಿತ ವಿಷಯಗಳು ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ವರದಿಗಾರಿಕೆ ಮಾಡುವಾಗ ಅವರು ಅತ್ಯಂತ ಸಂಯಮ, ಸಮತೋಲನ ಹಾಗೂ ಜವಾಬ್ದಾರಿಯುತ ನಿಲುವು ಪ್ರದರ್ಶಿಸಿದ್ದಾರೆ. ಸಮಾಜದ ಧ್ವನಿಯಾಗಿ ಜನರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅವರು ಸಲ್ಲಿಸಿರುವ ಸೇವೆ ಪ್ರಶಂಸನೀಯವಾಗಿದೆ.
ದೀರ್ಘಕಾಲದ ಪತ್ರಿಕೋದ್ಯಮ ಸೇವೆ, ಸಾಮಾಜಿಕ ಕಳಕಳಿ, ಜನಪರ ನಿಲುವು ಮತ್ತು ವೃತ್ತಿ ನಿಷ್ಠೆಯನ್ನು ಪರಿಗಣಿಸಿ ಸ್ಟಾರ್ ನ್ಯೂಸ್ ಚಾನೆಲ್ ವತಿಯಿಂದ ಅವರಿಗೆ “ಪತ್ರಕರ್ತ ಭೂಷಣ” ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಚಾನೆಲ್ನ ಮುಖ್ಯ ಸಂಪಾದಕರಾದ ನಂದಕುಮಾರ್ ವಾರೆ ತಿಳಿಸಿದ್ದಾರೆ.
ಜೂನ್ 7ರಂದು ಭಾನುವಾರ ಸೊಲಾಪುರದಲ್ಲಿ ಆಯೋಜಿಸಲಾಗಿರುವ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ಸೊಲಾಪುರದ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ರಾಜನ್ ಮಾನೆ, ಸೊಲಾಪುರ ನಗರ ಅಪರಾಧ ಶಾಖೆಯ ಹಿರಿಯ ಪೊಲೀಸ್ ನಿರೀಕ್ಷಕ ಅರವಿಂದ ಮಾನೆ, ಸೊಲಾಪುರ ಶ್ರಮಿಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಕ್ರಂ ಖೇಲಬುಡೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ನಂದಕುಮಾರ್ ವಾರೆ ಮಾಹಿತಿ ನೀಡಿದ್ದಾರೆ.
ದೀಪಕ್ ಶಿಂತ್ರೆ ಅವರಿಗೆ “ಪತ್ರಕರ್ತ ಭೂಷಣ” ಪ್ರಶಸ್ತಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಪತ್ರಕರ್ತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅವರ ಸೇವೆ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದು, ಈ ಗೌರವವು ಜಿಲ್ಲೆಯ ಪತ್ರಿಕೋದ್ಯಮ ಕ್ಷೇತ್ರಕ್ಕೂ ಹೆಮ್ಮೆಯ ವಿಷಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande