
ವಿಜಯಪುರ, 04 ಜೂನ್ (ಹಿ.ಸ.) :
ಆಂಕರ್ : ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ 2ನೇ ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣದ ತೀರ್ಪು, ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಳ ಹಾಗೂ ಉತ್ತರ ಕರ್ನಾಟಕದ ನೀರಾವರಿ ಹಕ್ಕುಗಳ ಕುರಿತು ಸಮಗ್ರ ಚರ್ಚೆ ನಡೆಸುವ ಉದ್ದೇಶದಿಂದ ಜೂನ್ 8ರಂದು ವಿಜಯಪುರದಲ್ಲಿ ಮಹತ್ವದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ರೈತ ಮುಖಂಡರಾದ ಅರವಿಂದ ಕುಲಕರ್ಣಿ ಮತ್ತು ಮಹಾದೇವಪ್ಪ ತೇಲಿ ತಿಳಿಸಿದ್ದಾರೆ.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಧೀಕರಣವು 2013ರಲ್ಲಿ ನೀಡಿದ ಅಂತಿಮ ತೀರ್ಪಿನಲ್ಲಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯ (ಆಲಮಟ್ಟಿ)ದ ನೀರಿನ ಮಟ್ಟವನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಹೆಚ್ಚಿಸಲು ಅನುಮತಿ ನೀಡಿದ್ದರೂ, ಕಳೆದ 13 ವರ್ಷಗಳಿಂದ ಸರ್ಕಾರಗಳು ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಉತ್ತರ ಕರ್ನಾಟಕ ಭಾಗದ ರೈತರಿಗೆ ನ್ಯಾಯಾಧೀಕರಣದ ತೀರ್ಪಿನಿಂದ ದೊರೆತಿರುವ ನೀರಿನ ಹಕ್ಕುಗಳು ಇನ್ನೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ಸೇರಿದಂತೆ ಐದು ಪ್ರಮುಖ ನದಿಗಳು ಹರಿಯುತ್ತಿದ್ದರೂ, ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿನ ಪೂರೈಕೆಯೂ ಸಮರ್ಪಕವಾಗಿ ದೊರೆಯದ ಕಾರಣ ರೈತರು ನಿರಂತರ ಹೋರಾಟಗಳ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಆಲಮಟ್ಟಿ ಅಣೆಕಟ್ಟು ನಿರ್ಮಾಣಕ್ಕಾಗಿ ಸಾವಿರಾರು ರೈತರು ತಮ್ಮ ಕೃಷಿ ಭೂಮಿ, ಮನೆ ಮತ್ತು ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಆದರೆ ಅವರಿಗೆ ಸಮರ್ಪಕ ಪುನರ್ವಸತಿ, ಪುನರ್ ನಿರ್ಮಾಣ ಮತ್ತು ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು. ನ್ಯಾಯಾಧೀಕರಣದ ತೀರ್ಪಿನಂತೆ ನೀರಿನ ಮಟ್ಟವನ್ನು 524.256 ಮೀಟರ್ಗೆ ಹೆಚ್ಚಿಸುವ ಪ್ರಕ್ರಿಯೆ ಜಾರಿಗೊಳಿಸಿದರೆ ಮುಳುಗಡೆಯಾಗುವ ಪ್ರದೇಶಗಳಿಗೆ ಪರಿಹಾರ, ಪುನರ್ವಸತಿ ಮತ್ತು ಮೂಲಸೌಕರ್ಯ ನಿರ್ಮಾಣಕ್ಕಾಗಿ ಈಗ ಸುಮಾರು ₹1 ಲಕ್ಷ ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇದೇ ಕಾರ್ಯವನ್ನು ತೀರ್ಪು ಬಂದ ತಕ್ಷಣ 2013ರಲ್ಲೇ ಕೈಗೊಂಡಿದ್ದರೆ ಸುಮಾರು ₹17 ಸಾವಿರ ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಬಹುದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ರಾಜಕೀಯ ಇಚ್ಛಾಶಕ್ತಿಯ ಕೊರತೆ, ಆಡಳಿತಾತ್ಮಕ ವಿಳಂಬ ಹಾಗೂ ನಿರ್ಲಕ್ಷ್ಯದ ಪರಿಣಾಮವಾಗಿ ರೈತ ಸಮುದಾಯಕ್ಕೆ ಅಪಾರ ನಷ್ಟ ಉಂಟಾಗಿದೆ. ರಾಜ್ಯಕ್ಕೆ ನ್ಯಾಯಾಧೀಕರಣದಿಂದ ಹಂಚಿಕೆಯಾದ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಕೃಷ್ಣಾ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯದ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ನೀರಾವರಿ ಯೋಜನೆಗಳನ್ನು ವೇಗವಾಗಿ ಅನುಷ್ಠಾನಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಜೂನ್ 8ರಂದು ವಿಚಾರ ಸಂಕಿರಣ
ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಳ, ನ್ಯಾಯಾಧೀಕರಣದ ತೀರ್ಪಿನ ಅನುಷ್ಠಾನ ಹಾಗೂ ಉತ್ತರ ಕರ್ನಾಟಕದ ನೀರಾವರಿ ಭವಿಷ್ಯದ ಕುರಿತು ನಡೆಯಲಿರುವ ವಿಚಾರ ಸಂಕಿರಣವು ಜೂನ್ 8, 2026ರ ಸೋಮವಾರ ಬೆಳಿಗ್ಗೆ 10.30 ಗಂಟೆಗೆ ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ವಿಷಯ ಮಂಡನೆಯನ್ನು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ರಾಜೇಂದ್ರ ಪೋದ್ದಾರ ಹಾಗೂ ಪಂಚಪ್ಪ ಕಲಬುರ್ಗಿ ನಡೆಸಲಿದ್ದಾರೆ. ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಸಿ. ಬಿರಾದಾರ ಹಾಗೂ ನಿಂಗನಗೌಡ ಎಂ. ಬಿರಾದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರೈತ ಮುಖಂಡರಾದ ಸಿದ್ಧನಗೌಡ ಪಾಟೀಲ ಮತ್ತು ಬಸವರಾಜ ಸಿದ್ದಾಪೂರ ಮಾತನಾಡಿ, ವಿಜಯಪುರ, ಬಾಗಲಕೋಟ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳ ರೈತರು, ನೀರಾವರಿ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಹೊನಕೇರೆಪ್ಪ ತೆಲಗಿ, ಸಂಗನಗೌಡ ಪಾಟೀಲ ಸೇರಿದಂತೆ ಹಲವಾರು ರೈತ ಮುಖಂಡರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande