ಪಕ್ಷ ಸಂಘಟಕರು ನನ್ನ ಜೊತೆ ಬನ್ನಿ : ಬಿ.ಕೆ. ಹರಿಪ್ರಸಾದ್
ಬೆಂಗಳೂರು, 04 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ. ಹರಿಪ್ರಸಾದ್ ಅವರು ಪಕ್ಷದ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದು, ಅಧಿಕಾರ ಮತ್ತು ಹುದ್ದೆಗಾಗಿ ರಾಜಕೀಯ ಮಾಡುವವರಿಗೂ, ಪಕ್ಷದ ತತ್ವ-ಸಿದ್ಧಾಂತಗಳಿಗಾಗಿ
BK.hriprasad


ಬೆಂಗಳೂರು, 04 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ. ಹರಿಪ್ರಸಾದ್ ಅವರು ಪಕ್ಷದ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದು, ಅಧಿಕಾರ ಮತ್ತು ಹುದ್ದೆಗಾಗಿ ರಾಜಕೀಯ ಮಾಡುವವರಿಗೂ, ಪಕ್ಷದ ತತ್ವ-ಸಿದ್ಧಾಂತಗಳಿಗಾಗಿ ಹೋರಾಡುವವರಿಗೂ ಇರುವ ವ್ಯತ್ಯಾಸವನ್ನು ಒತ್ತಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಅಧಿಕಾರ ಹಾಗೂ ಸಚಿವ ಸ್ಥಾನ ಬೇಕು ಎನ್ನುವವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೋಗಬಹುದು. ಆದರೆ ಕಾಂಗ್ರೆಸ್ ಪಕ್ಷ, ಹೋರಾಟ ಹಾಗೂ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕೈಬಲಪಡಿಸಬೇಕು ಎನ್ನುವವರು ನನ್ನೊಂದಿಗೆ ಬರಲಿ. ಇದರಲ್ಲಿ ಯಾವುದೇ ಬಣ ರಾಜಕೀಯ ಇಲ್ಲ” ಎಂದು ಹೇಳಿದರು.

ತಮ್ಮ ರಾಜಕೀಯ ಪಯಣವನ್ನು ಸ್ಮರಿಸಿದ ಹರಿಪ್ರಸಾದ್, ವಿದ್ಯಾರ್ಥಿ ಜೀವನದಿಂದಲೇ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಎಂದಿಗೂ ಅಧಿಕಾರ ಅಥವಾ ಸಚಿವ ಸ್ಥಾನಕ್ಕಾಗಿ ವರಿಷ್ಠರ ಬಳಿ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದರು. “ನಾನು ಅಧಿಕಾರಕ್ಕಾಗಿ ಪಕ್ಷದಲ್ಲಿಲ್ಲ. ನಾನು ಕಾಂಗ್ರೆಸ್ ಪಕ್ಷದ ಒಬ್ಬ ಸಿಪಾಯಿ. ಹಿರಿಯ ನಾಯಕರು ಹಾಕಿಕೊಟ್ಟ ಆದರ್ಶಗಳ ಮಾರ್ಗದಲ್ಲಿ ನಡೆಯುತ್ತ ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ” ಎಂದು ತಿಳಿಸಿದರು.

ತಮ್ಮ ಸಾಮಾಜಿಕ ಹಿನ್ನೆಲೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಹಿಂದುಳಿದ ವರ್ಗದವನಾ ಅಥವಾ ಮುಂದುವರಿದ ವರ್ಗದವನಾ ಎಂಬುದು ಮುಖ್ಯವಲ್ಲ. ನಾನು ಮುಂದುವರಿದವರಿಗಿಂತಲೂ ಮುಂದುವರಿದವನು” ಎಂದು ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯಿಸಿದರು.

ಇದೇ ವೇಳೆ, 2028ರ ವಿಧಾನ ಸಭೆ ಚುನಾವಣೆಗೆ ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಚರ್ಚೆಗಳನ್ನು ತಳ್ಳಿ ಹಾಕಿದ ಅವರು, “ಅದು ವಾಟ್ಸಪ್ ಯುನಿವರ್ಸಿಟಿಯ ಅಪಪ್ರಚಾರ. ನನ್ನ ಜವಾಬ್ದಾರಿ ಪಕ್ಷವನ್ನು ಸಂಘಟಿಸುವುದು. ಎಸ್ಐಆರ್ ಹಾಗೂ ಸಿಎಎ ವಿರುದ್ಧ ಹೋರಾಟ ನಡೆಸುವುದು. ಅಧಿಕಾರಕ್ಕಿಂತ ಹೋರಾಟವೇ ನನಗೆ ಮುಖ್ಯ” ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿ ಮಾದರಿಯ ಕುರಿತು ಮಾತನಾಡಿದ ಹರಿಪ್ರಸಾದ್, “ನಮಗೆ ಗುಜರಾತ್ ಮಾದರಿ ಅಗತ್ಯವಿಲ್ಲ. ಕರ್ನಾಟಕ ಮಾದರಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಸರ್ಕಾರ ಮತ್ತು ಪಕ್ಷದ ನಡುವೆ ಉತ್ತಮ ಸಮನ್ವಯ ಸಾಧಿಸಿಕೊಂಡು ಮುಂದುವರಿಯುತ್ತೇವೆ” ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande