
ಕೊಪ್ಪಳ, 04 ಜೂನ್ (ಹಿ.ಸ.) :
ಆ್ಯಂಕರ್ : ನಗರದ ವಾರ್ಡ ನಂ 12 ರ ಬಸವೇಶ್ವರ ನಗರದ ನಿವಾಸಿ, ಪುರಸಭೆ ಮಾಜಿ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ ಇಂದು(ಗುರುವಾರ) ಬೆಳಗಿನ ಜಾವ 3 ಘಂಟೆಗೆ ಕೊನೆಯುಸಿರೆಳೆದರು.
ಮೃತರು ಪತ್ನಿ ಶೇಖಮ್ಮ ಕಂದಾರಿ, ಓರ್ವ ಪುತ್ರಿ, ಮೂವರು ಪುತ್ರರನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವೃತ್ತಿಯಿಂದ ವಾಚ್ ರಿಪೇರಿ ಮಾಡುತ್ತಿದ್ದ ಇವರು, ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಒಳ ಹೊರಗುಗಳ ಬಗ್ಗೆ ಅಪಾರವಾದ ತಿಳುವಳಿಕೆ ಹೊಂದಿದ್ದರು.ಉತ್ತಮ ರಾಜಕೀಯ ವಿಶ್ಲೇಷಕರೂ ಆಗಿದ್ದರು. ಕೊಪ್ಪಳದ ಹನುಮಂತಪ್ಪ ಅಂಗಡಿ ಅವರು ಅವಿಭಜಿತ ರಾಯಚೂರು ಜಿಲ್ಲೆಯ ಜನತಾ ದಳದ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ 1994ರಲ್ಲಿ ಜನತಾದಳ ಪರಿಶಿಷ್ಟ ಜಾತಿ ವಿಭಾಗದ ತಾಲೂಕ ಘಟಕದ ಅಧ್ಯಕ್ಷರಾಗಿದ್ದರು.
1998-2000 ರವರೆಗೆ ಕೊಪ್ಪಳ ಪುರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಪುರಸಭಾಧ್ಯಕ್ಷರು, ಸದಸ್ಯರಾಗಿದ್ದ ದಿನಗಳಲ್ಲಿಯೂ ತಮ್ಮ ವೃತ್ತಿ ವಾಚ್ ರಿಪೇರಿ ಮಾಡುವುದನ್ನು ಅವರು ಮರೆತಿರಲಿಲ್ಲ. ಪ್ರತಿದಿನ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಕೆಲಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರು. ಕರಡಿ ಸಂಗಣ್ಣ ನವರು ಶಾಸಕರು,ಸಂಸದರಾಗಿ ಆಯ್ಕೆಯಾಗುವಲ್ಲಿ ಶ್ರಮಿಸಿದರು,
ಭಾರತೀಯ ಜನತಾ ಪಕ್ಷದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದರು. ಕನಕಗಿರಿ ವಿಧಾನ ಸಭಾ ಮೀಸಲು ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಇವರ ಹೆಸರು ಮೂಂಚೂಣಿಯಲ್ಲಿತ್ತು. ಕೊಪ್ಪಳ ಜಿಲ್ಲಾ ಮಾದಿಗ ಸಮಾಜದ ಮುಖಂಡರಾಗಿ ಕೊಪ್ಪಳದ ರಾಜಕರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಗವಿಸಿದ್ಧಪ್ಪ ಕಂದಾರಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 3 ಘಂಟೆಗೆ ಸಿಂದೋಗಿ ರಸ್ತೆಯ ಘನತಾಜ್ಯ ನಿರ್ವಹಣೆ ಘಟಕದ ಪಕ್ಕದಲ್ಲಿರುವ ಅವರ ಕೃಷಿಭೂಮಿಯಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಕ್ಕಾಗಿ
-ನಾಗರಾಜ ಕಂದಾರಿ
8050438538.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್