
ಗದಗ, 04 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯಲ್ಲಾಗುವ ಯಾವುದೇ ವ್ಯತ್ಯಯವನ್ನು ಸಂಬಂಧಪಟ್ಟ ತೈಲ ಕಂಪನಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರು ಸಮರ್ಪಕವಾಗಿ ನಿರ್ವಹಿಸಬೇಕು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕದಿಂದ ಇಂಧನ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸ್ಪಷ್ಟಪಡಿಸಿದರು.
ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಪೆಟ್ರೋಲ್ ಬಂಕ್ ಮಾಲೀಕರು, ತೈಲ ಕಂಪನಿಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಇಂಧನ ಕೊರತೆ ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಹಾಗೂ ಕೆಲವು ಬಂಕ್ಗಳಲ್ಲಿ ಕಂಡುಬಂದ ಜನದಟ್ಟಣೆ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿತ್ತು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳು ಮಾತನಾಡುತ್ತಾ, ತೈಲ ಕಂಪನಿಗಳು ಸಮಯಕ್ಕೆ ಸರಿಯಾಗಿ ಇಂಧನ ಪೂರೈಕೆ ಮಾಡುವಲ್ಲಿ ಯಾವುದೇ ವಿಳಂಬ ಮಾಡಬಾರದು. ಇಂಧನ ಸಾಕಷ್ಟು ದಾಸ್ತಾನು ಇದ್ದರೂ ಸಾರ್ವಜನಿಕರಿಗೆ “ಇಂಧನ ಲಭ್ಯವಿಲ್ಲ” ಎಂಬ ಫಲಕ ಹಾಕಿ ಬಂಕ್ ಮುಚ್ಚುವುದು ಅಥವಾ ಕೃತಕ ಅಭಾವ ಸೃಷ್ಟಿಸುವುದು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಅವರು ಕಠಿಣ ಎಚ್ಚರಿಕೆ ನೀಡಿದರು.
ಇಂಧನ ವಿತರಣಾ ವ್ಯವಸ್ಥೆಯನ್ನು ಸುಗಮಗೊಳಿಸಲು ಇಲಾಖೆಯ ಆಟೋಮೇಷನ್ ವ್ಯವಸ್ಥೆಯ ಮೂಲಕ ಬಂಕ್ಗಳ ದಾಸ್ತಾನು ಸ್ಥಿತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸುವ ವ್ಯವಸ್ಥೆ ಇರುವುದನ್ನು ಅವರು ನೆನಪಿಸಿದರು. ನಿಯಮ ಉಲ್ಲಂಘನೆ ಮಾಡುವ ಡೀಲರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಡಳಿತ ಪೆಟ್ರೋಲ್ ಬಂಕ್ಗಳಿಗೆ ಇಂಧನ ಸರಬರಾಜಿನಲ್ಲಿ ಅಗತ್ಯ ಸಹಕಾರ ನೀಡಲು ಸಿದ್ಧವಾಗಿದೆ. ಬಂಕ್ ಮಾಲೀಕರು ಸಹ ಸರ್ಕಾರದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ, ಇಂಧನ ವಿತರಣೆಯಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಇಂಧನ ಕೊರತೆ ಅಥವಾ ವ್ಯತ್ಯಯದಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಇಂಡೆಂಟ್ ಆಧಾರದ ಮೇಲೆ ಆದ್ಯತೆಯ ಕ್ರಮದಲ್ಲಿ ಇಂಧನ ಪೂರೈಕೆ ಆಗಬೇಕು. ಎಲ್ಲ ಗ್ರಾಹಕರಿಗೂ ಸಮಾನ ಅವಕಾಶ ದೊರೆಯುವ ರೀತಿಯಲ್ಲಿ ವಿತರಣಾ ವ್ಯವಸ್ಥೆ ರೂಪಿಸಬೇಕು ಎಂದು ನಿರ್ದೇಶಿಸಿದರು.
ದೈನಂದಿನ ವಾಹನ ಸವಾರರಿಗೆ ಯಾವುದೇ ಅಡೆತಡೆಯಿಲ್ಲದೆ ಇಂಧನ ಪೂರೈಸಬೇಕು. ಬಂಕ್ಗಳಲ್ಲಿ ಜನಸಂದಣಿ ಹೆಚ್ಚಾದ ಸಂದರ್ಭದಲ್ಲೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಅಪಘಾತ ಅಥವಾ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕ್ಯಾನ್ ಹಾಗೂ ಬ್ಯಾರೆಲ್ಗಳಲ್ಲಿ ಇಂಧನ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಆಸ್ಪತ್ರೆಗಳು, ಎಟಿಎಂ ಕೇಂದ್ರಗಳು, ಮೊಬೈಲ್ ಟವರ್ಗಳು ಹಾಗೂ ಇತರೆ ಅಗತ್ಯ ಸೇವೆಗಳ ಜನರೇಟರ್ಗಳಿಗೆ ಡೀಸೆಲ್ ಅನಿವಾರ್ಯವಾದ ಸಂದರ್ಭದಲ್ಲಿ ಮಾತ್ರ ಸಂಬಂಧಪಟ್ಟವರು ಸ್ಥಳೀಯ ತಹಶೀಲ್ದಾರ್ ಅಥವಾ ಜಿಲ್ಲಾಡಳಿತದಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆಹಾರ ಇಲಾಖೆ ಅಥವಾ ಕಂದಾಯ ಇಲಾಖೆಯ ಅನುಮೋದನೆ ಪಡೆದವರಿಗಷ್ಟೇ ನಿರ್ದಿಷ್ಟ ಸಂದರ್ಭಗಳಲ್ಲಿ ಕ್ಯಾನ್ ಅಥವಾ ಬ್ಯಾರೆಲ್ ಮೂಲಕ ಇಂಧನ ವಿತರಣೆ ಮಾಡಬೇಕು ಎಂದು ಅವರು ಹೇಳಿದರು. ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಇಂಧನ ವಿತರಣಾ ಪ್ರಕ್ರಿಯೆ ನಡೆಯಬೇಕು ಎಂದು ಅವರು ಪುನರುಚ್ಚರಿಸಿದರು.
ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಬಂಕ್ ಮಾಲೀಕರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಬಂಕ್ಗಳ ವಿರುದ್ಧ ಸರ್ಕಾರ ಅಗತ್ಯ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ತೈಲ ಕಂಪನಿಗಳ ಪ್ರತಿನಿಧಿಗಳು ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ವಿಶೇಷವಾಗಿ ಹುಬ್ಬಳ್ಳಿಯಿಂದ ಇಂಧನ ಟ್ಯಾಂಕರ್ಗಳು ಬರುವಾಗ ಸಂಚಾರ ದಟ್ಟಣೆಯಿಂದ ಉಂಟಾಗುವ ವಿಳಂಬವನ್ನು ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.
ಇಂಧನ ಸರಬರಾಜು ಸರಪಳಿ ಸುಗಮಗೊಳಿಸಲು ರಸ್ತೆ ಸಂಚಾರ ವ್ಯವಸ್ಥೆ ಹಾಗೂ ಲಾಜಿಸ್ಟಿಕ್ ವ್ಯವಸ್ಥೆಯಲ್ಲಿ ಅಗತ್ಯ ಸಹಕಾರ ನೀಡುವಂತೆ ಪ್ರತಿನಿಧಿಗಳು ಕೋರಿದರು.
ಸಭೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕರು, ತೈಲ ಕಂಪನಿಗಳ ಸೇಲ್ಸ್ ಅಧಿಕಾರಿಗಳು, ಪೆಟ್ರೋಲ್ ಬಂಕ್ ಮಾಲೀಕರು, ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಇಂಧನ ಪೂರೈಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಕ್ರಮಗಳ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / lalita MP