ಗದಗ ಜಿಲ್ಲೆ ಕ್ರೀಡಾಪಟುಗಳ ಮಾಹಿತಿಗೆ ಮಹತ್ವದ ಸೂಚನೆ
ನಾನಾ
ಫೋಟೋ


ಗದಗ, 04 ಜೂನ್ (ಹಿ.ಸ.) :

ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕೇಂದ್ರ ಹಾಗೂ ಗದಗ ಜಿಲ್ಲೆಯಲ್ಲಿ ನಾನಾ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳ ಅಧಿಕೃತ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಎಲ್ಲಾ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ, ಗದಗ ಇಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನಾಂಕವಾಗಿದ್ದು, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

ಅರ್ಜಿ ನಮೂನೆಯಲ್ಲಿ ಕ್ರೀಡಾಪಟುಗಳು ತಮ್ಮ ವೈಯಕ್ತಿಕ ಹಾಗೂ ಕ್ರೀಡಾ ಸಾಧನೆಗಳ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಜೊತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ, ತಮ್ಮ ಸಾಧನೆಗಳಿಗೆ ಸಂಬಂಧಿಸಿದ ಪ್ರಶಸ್ತಿ ಪತ್ರಗಳು ಹಾಗೂ ಅಗತ್ಯ ದಾಖಲೆಗಳನ್ನು ಸೇರಿಸಿ ಕಚೇರಿಗೆ ಸಲ್ಲಿಸಬೇಕಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಈ ಮಾಹಿತಿ ಸಂಗ್ರಹಣೆಯ ಮುಖ್ಯ ಉದ್ದೇಶವು ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳ ಸಮಗ್ರ ಡೇಟಾಬೇಸ್ ಸಿದ್ಧಪಡಿಸುವುದಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯಗಳು, ಪ್ರೋತ್ಸಾಹ ಯೋಜನೆಗಳು ಹಾಗೂ ಗುರುತಿನ ಚಿಹ್ನೆಗಳಿಗಾಗಿ ಈ ದಾಖಲೆ ಉಪಯುಕ್ತವಾಗಲಿದೆ ಎಂದು ಇಲಾಖೆಯು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ, ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣವನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೇ ಹಾಕಿ ತರಬೇತುದಾರರಾದ ಮಂಜುನಾಥ್ ಬಾಗಡೆ (ದೂರವಾಣಿ: 9036533909) ಹಾಗೂ ಸೈಕ್ಲಿಂಗ್ ತರಬೇತುದಾರರಾದ ಶ್ರೀಮತಿ ವಿದ್ಯಾ ಕುಲಕರ್ಣಿ (ದೂರವಾಣಿ: 8951936636) ಅವರನ್ನು ಸಂಪರ್ಕಿಸಬಹುದು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶರಣು ಗೋಗೇರಿ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande