ಕೃಷ್ಣಾ ನದಿಯಲ್ಲಿ ಅಕ್ರಮ ಮಣ್ಣು ಸಾಗಣೆ ವಿರುದ್ಧ ರೈತರ ಆಕ್ರೋಶ
ವಿಜಯಪುರ, 04 ಜೂನ್ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯ ಕೊಲ್ಹಾರ ಸಮೀಪದ ಕೃಷ್ಣಾ ನದಿಯಿಂದ ಅಕ್ರಮವಾಗಿ ಮಣ್ಣು ಕದ್ದು ಸಾಗಣೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ-218ರ ಕೊಲ್ಹಾರ ಸೇತುವೆ ಪಕ್ಕದ ತೋಟ
ಮರಳು


ವಿಜಯಪುರ, 04 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಕೊಲ್ಹಾರ ಸಮೀಪದ ಕೃಷ್ಣಾ ನದಿಯಿಂದ ಅಕ್ರಮವಾಗಿ ಮಣ್ಣು ಕದ್ದು ಸಾಗಣೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ-218ರ ಕೊಲ್ಹಾರ ಸೇತುವೆ ಪಕ್ಕದ ತೋಟದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಡಂಪರ್ ವಾಹನಗಳನ್ನು ತಡೆದು ರೈತರು ತಮ್ಮ ಅಸಮಾಧಾನ ಹೊರಹಾಕಿದರು.

ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದ್ದಂತೆಯೇ ಮಣ್ಣು ಮಾಫಿಯಾದ ಚಟುವಟಿಕೆಗಳು ಹೆಚ್ಚಾಗಿದ್ದು, ರಾತ್ರಿ-ಹಗಲು ನಿರಂತರವಾಗಿ ಮಣ್ಣು ಸಾಗಣೆ ನಡೆಯುತ್ತಿದೆ. ಡಂಪರ್ಗಳಲ್ಲಿ ನಿಯಮ ಮೀರಿ ಅತಿಯಾದ ಪ್ರಮಾಣದಲ್ಲಿ ಮಣ್ಣು ತುಂಬಿಕೊಂಡು ಸಾಗಿಸಲಾಗುತ್ತಿದ್ದು, ಇದರಿಂದ ರಸ್ತೆ ಸಂಪೂರ್ಣ ಹಾಳಾಗುತ್ತಿದೆ ಎಂದು ರೈತರು ದೂರಿದರು.

ಅಕ್ರಮ ಮಣ್ಣು ಸಾಗಣೆಯಿಂದ ರಸ್ತೆಯ ಮೇಲೆ ನಿರಂತರ ಧೂಳು ಆವರಿಸುತ್ತಿದ್ದು, ಸುತ್ತಮುತ್ತಲಿನ ಕೃಷಿ ಜಮೀನುಗಳ ಬೆಳೆಗಳ ಮೇಲೆ ಧೂಳು ಕುಳಿತು ಬೆಳೆಗಳಿಗೆ ಹಾನಿಯಾಗುತ್ತಿದೆ. ಜೊತೆಗೆ ವಾಹನಗಳ ಸಂಚಾರದಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ರೈತರು ಆರೋಪಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ರೈತರಾದ ಮಲ್ಲಪ್ಪ ಗಾಣಿಗೇರ ಮತ್ತು ಲಕ್ಷ್ಮಣ ಅಂಬಿಗೇರ, “ಕೃಷ್ಣಾ ನದಿಯಲ್ಲಿ ಅಕ್ರಮ ಮಣ್ಣು ಸಾಗಣೆ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿಲ್ಲ. ಜನರ ಸುರಕ್ಷತೆಯನ್ನು ಕಾಪಾಡಬೇಕಾದ ಅಧಿಕಾರಿಗಳೇ ಮೌನ ವಹಿಸಿರುವುದು ಅಚ್ಚರಿಯ ಸಂಗತಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಡಂಪರ್ ವಾಹನಗಳ ಅತಿಯಾದ ಓಡಾಟದಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರಂತರವಾಗಿ ವಾಹನಗಳು ಓಡಾಡುತ್ತಿದ್ದು, ಧೂಳಿನ ಮಬ್ಬಿನಿಂದ ರಸ್ತೆ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಪಘಾತಗಳ ಭೀತಿ ಹೆಚ್ಚಿದ್ದು, ಸಾರ್ವಜನಿಕರು ಹಾಗೂ ರೈತರು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ವಾಯು ಮಾಲಿನ್ಯದಿಂದ ಕೃಷಿ ಚಟುವಟಿಕೆಗಳ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತಿದೆ” ಎಂದು ಅವರು ಹೇಳಿದರು.

ತಾಲೂಕು ಆಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಮಣ್ಣು ಸಾಗಣೆಗೆ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ರೈತರು ಆಗ್ರಹಿಸಿದರು.

ಕೃಷ್ಣಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಣೆಯನ್ನು ತಕ್ಷಣ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನಾಗಪ್ಪ ಏಳಗಂಟಿ, ಮಲ್ಲಯ್ಯ ಮಠಪತಿ, ಸುರೇಶ್ ಉಪ್ಪಾರ, ಬಸವರಾಜ ಗಾಣಿಗೇರ, ಪರಮಾನಂದ ಬರಗಿ ಸೇರಿದಂತೆ ಅನೇಕ ರೈತರು ಭಾಗವಹಿಸಿ ಅಕ್ರಮ ಮಣ್ಣು ಸಾಗಣೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande