
ಬೆಂಗಳೂರು, 04 ಜೂನ್ (ಹಿ.ಸ.) :
ಆ್ಯಂಕರ್ : ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳ ಸಭೆ ನಡೆಸಿದರು.
ನಂತರ ಮಾಧ್ಯಮಗೋಷ್ಠಿ ನಡೆಸಿ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ ಅವರು, “ನಮ್ಮ ಸರ್ಕಾರದಲ್ಲಿ ಅನಿವಾಸಿ ಭಾರತೀಯರ (ಎನ್ಆರ್ ಐ) ಸಚಿವಾಲಯ ತೆರೆಯಲು ಸರ್ಕಾರ ಮುಂದಾಗಿದೆ. ನಮ್ಮ ರಾಜ್ಯದಲ್ಲಿ ಎನ್ಆರ್ ಐಗಳು ಬಂಡವಾಳ ಹೂಡಿಕೆಗೆ ಆಸಕ್ತಿ ಹೊಂದಿದ್ದರೆ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಈ ಸಚಿವಾಲಯ ಸಹಾಯವಾಗುತ್ತದೆ.
ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿರುವೆ. ಸಾರ್ವಜನಿಕರ ಕುಂದುಕೊರತೆಯ ಸಚಿವಾಲಯ ಆರಂಭಿಸಿ, ಜನರ ಅರ್ಜಿ, ವಿಚಾರಧಾರೆ, ಸಮಸ್ಯೆ ಆಲಿಸಲು ಪ್ರತ್ಯೇಕ ಸಚಿವರ ನೇಮಕ ಮಾಡಲಾಗುವುದು. ಪ್ರತಿ ನಿತ್ಯ ವಿವಿಧ ತಂಡಗಳು ಪ್ರತಿಭಟನೆ ನಡೆಸುತ್ತಿದ್ದು, ಅವರ ವಿಚಾರ ಆಲಿಸಿ, ಸ್ಪಂದಿಸಲು ಸರ್ಕಾರ ಮುಂದಾಗಿದೆ” ಎಂದು ಮುಖ್ಯಮಂತ್ರಿ ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.