
ಬಳ್ಳಾರಿ, 04 ಜೂನ್ (ಹಿ.ಸ.) :
ಆ್ಯಂಕರ್ : ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆ ಮತ್ತು ನಿಷೇಧ) ಕಾಯ್ದೆ 1994 ರಡಿ ರಾಜ್ಯ ಸರ್ಕಾರವು ಮುಂದಿನ ಮೂರು ವರ್ಷಗಳ ಅವಧಿಗೆ ‘ಜಿಲ್ಲಾ ಸಲಹಾ ಸಮಿತಿ’ ಯನ್ನು ಪುನರ್ ರಚಿಸಿ ಆದೇಶಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಾನೂನುಬಾಹಿರ ಭ್ರೂಣಲಿಂಗ ಪತ್ತೆ ಕಾರ್ಯಗಳಿಗೆ ಕಡಿವಾಣ ಹಾಕುವುದು, ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ನಿಗಾ ಇಡುವುದು ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಈ ಸಮಿತಿಯು ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಪಿಸಿ-ಪಿಎನ್ಡಿಟಿ ಕಾಯ್ದೆ 1994 ರ ಕಲಂ 17ರ ಉಪಕಲಂ 5 ಮತ್ತು 6 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಸಮಿತಿಗಳನ್ನು ಪುನರ್ ರಚಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ಮತ್ತು ಲಿಂಗ ಅನುಪಾತದ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಸಮಿತಿ ಜಿಲ್ಲಾ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಮೂರು ವರ್ಷಗಳ ಅವಧಿ:
ಪುನರ್ ರಚನೆಗೊಂಡಿರುವ ಈ ಜಿಲ್ಲಾ ಸಲಹಾ ಸಮಿತಿಯು ಮುಂದಿನ ಮೂರು ವರ್ಷಗಳ ಅವಧಿಗೆ ಅಸ್ತಿತ್ವದಲ್ಲಿರಲಿದೆ. ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ಗಳು, ಐವಿಎಫ್ ಕ್ಲಿನಿಕ್ಗಳು ಮತ್ತು ಆಸ್ಪತ್ರೆಗಳು ಪಿಸಿಪಿಎನ್ಡಿಟಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ ಎಂಬುದನ್ನು ಸಮಿತಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಕಾನೂನು ಬಾಹಿರವಾಗಿ ಲಿಂಗ ಪತ್ತೆ ಮಾಡುವ ಕೇಂದ್ರಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಪ್ರಾಧಿಕಾರಕ್ಕೆ ಈ ಸಮಿತಿಯು ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಬೇಕು. ಸಮಾಜದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಲಿಂಗ ತಾರತಮ್ಯ ನಿವಾರಣೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಸಮಿತಿ ಉತ್ತೇಜನ ನೀಡಲಿದೆ ಎಂದರು.
ಪಿಸಿಪಿಎನ್ಡಿಟಿ ಕಾಯ್ದೆಯ ಸೆಕ್ಷನ್ 17(6) ರ ಅನ್ವಯ ಹಾಗೂ ಸರ್ಕಾರದ ವಿವಿಧ ನಿರ್ದೇಶನಗಳನ್ವಯ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿ ಸೇರಿ ಒಟ್ಟು 8 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ಜಿಲ್ಲಾ ಸಲಹಾ ಸಮಿತಿಯ ಸದಸ್ಯರ ವಿವರ :
ಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ನಿಗಾ ವಹಿಸಲು ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿಯನ್ನು ರೂಪಿಸಲಾಗಿದ್ದು, ಸಮಿತಿಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೀರೇಂದ್ರ ಕುಮಾರ್ ಕೆ.ಜಿ,. ಸ್ತ್ರೀರೋಗ ತಜ್ಞರಾದ ಡಾ.ಪ್ರಣೀತಾ ಅಜಯ್, ಮಕ್ಕಳ ತಜ್ಞ ಡಾ.ಯೋಗಾನಂದ ರೆಡ್ಡಿ.ವೈ.ಸಿ., ರೇಡಿಯಾಲಜಿಸ್ಟ್ ಡಾ.ಕೃಷ್ಣ ಮೂರ್ತಿ.ಎನ್., ಕಾನೂನು ತಜ್ಞ ಮಂಜುನಾಥ ಪೂಜಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಸಮಾಜ ಸೇವಕರಾದ ರಾಧಾ ಕೆ.ಎಸ್., ಎ.ಹೆಚ್.ಅಶೋಕಕುಮಾರ್ ಜೈನ್, ಅಶೋಕ್ ಪಾಟೀಲ್ ಒಳಗೊಂಡಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಜಿಲ್ಲೆಯಲ್ಲಿ 87 ಸ್ಕ್ಯಾನಿಂಗ್ ಕೇಂದ್ರಗಳು ಸಕ್ರಿಯ :
ಬಳ್ಳಾರಿ ಜಿಲ್ಲಾದ್ಯಂತ ಒಟ್ಟು 152 ನೋಂದಾಯಿತ ಸ್ಕ್ಯಾನಿಂಗ್ ಕೇಂದ್ರಗಳಿದ್ದು, ಅವುಗಳಲ್ಲಿ ಸದ್ಯ 87 ಕೇಂದ್ರಗಳು ಮಾತ್ರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ 65 ಕೇಂದ್ರಗಳು ವಿವಿಧ ಕಾರಣಗಳಿಂದಾಗಿ ಸದ್ಯ ಕಾರ್ಯನಿರ್ವಹಿಸುತ್ತಿಲ್ಲ (ನಾನ್-ಫಂಕ್ಷನಲ್) ಎಂದು ಡಿಹೆಚ್ಓ ತಿಳಿಸಿದರು.
ತಾಲ್ಲೂಕುವಾರು ಸ್ಕ್ಯಾನಿಂಗ್ ಕೇಂದ್ರಗಳ ವಿವರ :
ಬಳ್ಳಾರಿ ತಾಲ್ಲೂಕಿನಲ್ಲಿ ಒಟ್ಟು 116 ನೋಂದಾಯಿತ ಕೇಂದ್ರಗಳನ್ನು ಹೊಂದಿದ್ದು, ಪ್ರಸ್ತುತ 67 ಕೇಂದ್ರಗಳು ಸಕ್ರಿಯವಾಗಿವೆ. 10 ಕೇಂದ್ರಗಳ ಪರವಾನಗಿ ರದ್ದಾಗಿದ್ದು, 5 ಕೇಂದ್ರಗಳು ಸ್ವಯಂಪ್ರೇರಿತವಾಗಿ ಸರೆಂಡರ್ ಆಗಿವೆ. 7 ಕೇಂದ್ರಗಳು ಇತರೆ ಕಾರಣಗಳಿಂದ ಹಾಗೂ 24 ಕೇಂದ್ರಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿದ್ದು, ಒಟ್ಟು 46 ಕೇಂದ್ರಗಳು ಸದ್ಯ ನಿಷ್ಕ್ರಿಯವಾಗಿವೆ.
ಕಂಪ್ಲಿ ತಾಲ್ಲೂಕಿನಲ್ಲಿ ಒಟ್ಟು 4 ಕೇಂದ್ರಗಳಿದ್ದು, ನಾಲ್ಕೂ ಕೇಂದ್ರಗಳೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಕುರುಗೋಡು ತಾಲ್ಲೂಕಿನಲ್ಲಿ ಕೇವಲ 1 ಕೇಂದ್ರವಿದ್ದು, ಅದು ಸಕ್ರಿಯವಾಗಿದೆ. ಸಂಡೂರು ತಾಲ್ಲೂಕಿನಲ್ಲಿ ಒಟ್ಟು 10 ಕೇಂದ್ರಗಳಿದ್ದು, 6 ಕೇಂದ್ರಗಳು ಸಕ್ರಿಯವಾಗಿವೆ ಮತ್ತು 4 ಕೇಂದ್ರಗಳು ನಿಷ್ಕ್ರಿಯಗೊಂಡಿವೆ (ಇದರಲ್ಲಿ 1 ಸರೆಂಡರ್, 1 ಇತರೆ ಕಾರಣ ಮತ್ತು 2 ಶಾಶ್ವತವಾಗಿ ಮುಚ್ಚಲ್ಪಟ್ಟಿವೆ).
ಸಿರುಗುಪ್ಪ ತಾಲ್ಲೂಕಿನಲ್ಲಿ ಒಟ್ಟು 21 ಕೇಂದ್ರಗಳಿದ್ದು, 9 ಕೇಂದ್ರಗಳು ಸಕ್ರಿಯವಾಗಿವೆ. ಉಳಿದ 11 ಕೇಂದ್ರಗಳು ನಿಷ್ಕ್ರಿಯಗೊಂಡಿದ್ದು, ಇದರಲ್ಲಿ 1 ರದ್ದತಿ, 1 ಸರೆಂಡರ್, 3 ಇತರೆ ಕಾರಣ ಹಾಗೂ 6 ಕೇಂದ್ರಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ.
ಸರ್ಕಾರಿ ಹಾಗೂ ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳ ವರ್ಗೀಕರಣ :
ಜಿಲ್ಲೆಯಲ್ಲಿ ಪ್ರಸ್ತುತ ಸಕ್ರಿಯವಾಗಿರುವ 87 ಕೇಂದ್ರಗಳಲ್ಲಿ ಒಟ್ಟಾರೆಯಾಗಿ 9 ಸರ್ಕಾರಿ ಸ್ವಾಮ್ಯದ ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ 78 ಖಾಸಗಿ ಒಡೆತನದ ಸ್ಕ್ಯಾನಿಂಗ್ ಕೇಂದ್ರಗಳು ಸಾರ್ವಜನಿಕ ಸೇವೆಗೆ ಲಭ್ಯವಿವೆ. ಲಿಂಗ ಪತ್ತೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಈ ಕೇಂದ್ರಗಳ ಮೇಲೆ ನಿರಂತರ ನಿಗಾ ವಹಿಸಿದೆ ಎಂದು ಅವರು ಹೇಳಿದರು.
ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳು ಗರ್ಭಿಣಿಯರ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ಅಪ್ಡೇಟ್ ಮಾಡಬೇಕು. ಸೂಕ್ತ ಗುರುತಿನ ಚೀಟಿ ಇಲ್ಲದೆ ಯಾವುದೇ ಸ್ಕ್ಯಾನಿಂಗ್ ಮಾಡಲು ಅವಕಾಶ ನೀಡಬಾರದು. ಜಿಲ್ಲೆಯಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ತಡೆಯಲು ತೀವ್ರ ನಿಗಾ ವಹಿಸಲಾಗುತ್ತಿದೆ ಎಂದರು.
ಇದೇ ವೇಳೆ ಸಮಿತಿಯ ಸದಸ್ಯರು ತಮ್ಮ ಸಲಹೆ-ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೀರೇಂದ್ರ ಕುಮಾರ್, ಸ್ತ್ರೀರೋಗ ತಜ್ಞರಾದ ಡಾ.ಪ್ರಣೀತಾ ಅಜಯ್, ಮಕ್ಕಳ ತಜ್ಞ ಡಾ.ಯೋಗಾನಂದ ರೆಡ್ಡಿ.ವೈ.ಸಿ., ರೇಡಿಯಾಲಜಿಸ್ಟ್ ಡಾ.ಕೃಷ್ಣ ಮೂರ್ತಿ.ಎನ್., ಕಾನೂನು ತಜ್ಞ ಮಂಜುನಾಥ ಪೂಜಾರ್, ರೆಡ್ ಕ್ರಾಸ್ ಸಂಸ್ಥೆಯ ಸಮಾಜ ಸೇವಕ ಎ.ಹೆಚ್.ಅಶೋಕಕುಮಾರ್ ಜೈನ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ವಿಷಯ ನಿರ್ವಾಹಕ ಗೋಪಾಲ್ ಕೆ.ಹೆಚ್., ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಎಸ್.ಕರ್ಜಗಿ, ರೇಣುಕಾ ಜಡಗನ್ನನವರ್, ಆರೋಗ್ಯ ನಿರೀಕ್ಷಣಾಧಿಕಾರಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್