ಕೋಟೆಗೋಡೆ ಕಂದಕ ಸ್ವಚ್ಛತಾ ಕಾಮಗಾರಿಗೆ ಚಾಲನೆ ; ಕಸ, ಒಳಚರಂಡಿ ನೀರು ಬಿಡದಂತೆ ಪಾಲಿಕೆ ಮನವಿ
ವಿಜಯಪುರ, 04 ಜೂನ್ (ಹಿ.ಸ.) : ಆಂಕರ್ : ವಿಜಯಪುರ ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದು ಪ್ರವಾಹದಂತಹ ಸಮಸ್ಯೆಗಳು ಉಂಟಾಗದಂತೆ ತಡೆಗಟ್ಟುವ ಉದ್ದೇಶದಿಂದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಸಮೀಪದ ಕೋಟೆ ಗೋಡೆಯ ಕಂದಕದಿಂದ ಶಹಾಪುರ ಆಗಸಿವರೆಗೆ ವ್ಯಾಪಕ ಸ್ವಚ್ಛತಾ ಕಾಮಗಾರಿಯನ್ನು ವ
ಕೊಳಚೆ


ವಿಜಯಪುರ, 04 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದು ಪ್ರವಾಹದಂತಹ ಸಮಸ್ಯೆಗಳು ಉಂಟಾಗದಂತೆ ತಡೆಗಟ್ಟುವ ಉದ್ದೇಶದಿಂದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಸಮೀಪದ ಕೋಟೆ ಗೋಡೆಯ ಕಂದಕದಿಂದ ಶಹಾಪುರ ಆಗಸಿವರೆಗೆ ವ್ಯಾಪಕ ಸ್ವಚ್ಛತಾ ಕಾಮಗಾರಿಯನ್ನು ವಿಜಯಪುರ ಮಹಾನಗರ ಪಾಲಿಕೆ ಆರಂಭಿಸಿದೆ.

ಕಂದಕದಲ್ಲಿ ವರ್ಷಗಳಿಂದ ಸಂಗ್ರಹವಾಗಿದ್ದ ಹೂಳು, ಮುಳ್ಳಿನ ಗಿಡಗಂಟಿಗಳು, ಕಸ-ಕಡ್ಡಿಗಳು ಹಾಗೂ ಇತರೆ ತ್ಯಾಜ್ಯಗಳನ್ನು ತೆರವುಗೊಳಿಸುವ ಕಾರ್ಯವನ್ನು ಯಂತ್ರೋಪಕರಣಗಳ ಸಹಾಯದಿಂದ ಕೈಗೊಳ್ಳಲಾಗಿದೆ.

ಮಳೆಗಾಲದಲ್ಲಿ ನೀರಿನ ಹರಿವಿಗೆ ಅಡ್ಡಿಯಾಗುವ ಅಂಶಗಳನ್ನು ನಿವಾರಿಸುವ ಮೂಲಕ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ಕಲ್ಪಿಸುವುದು ಈ ಕಾಮಗಾರಿಯ ಪ್ರಮುಖ ಉದ್ದೇಶವಾಗಿದೆ.

ನಗರದ ಹಲವು ಭಾಗಗಳಲ್ಲಿ ಭಾರಿ ಮಳೆಯ ಸಂದರ್ಭದಲ್ಲಿ ನೀರು ನಿಲ್ಲುವುದು ಹಾಗೂ ಕೆಲವೆಡೆ ಪ್ರವಾಹದಂತಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕಂದಕಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

ಈ ಕಾಮಗಾರಿಯಿಂದ ಕೋಟೆಗೋಡೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲುವ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಕಂದಕಗಳಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ, ಕಟ್ಟಡ ಅವಶೇಷಗಳು ಹಾಗೂ ಒಳಚರಂಡಿ ನೀರನ್ನು ಹರಿಬಿಡದಂತೆ ಮನವಿ ಮಾಡಿದ್ದಾರೆ. ಇಂತಹ ಕೃತ್ಯಗಳಿಂದ ಕಂದಕಗಳು ಮುಚ್ಚಿಕೊಂಡು ನೀರಿನ ಹರಿವಿಗೆ ಅಡ್ಡಿಯಾಗುವುದರ ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ನಗರದ ಐತಿಹಾಸಿಕ ಕೋಟೆಗೋಡೆ ಪ್ರದೇಶದ ಸ್ವಚ್ಛತೆ ಹಾಗೂ ಸಂರಕ್ಷಣೆಯ ದೃಷ್ಟಿಯಿಂದಲೂ ಈ ಕಾಮಗಾರಿ ಮಹತ್ವದ್ದಾಗಿದ್ದು, ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಿ ನಗರವನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡಲು ಕೈಜೋಡಿಸಬೇಕು ಎಂದು ಮನವಿ ಮಾಡಲಾಗಿದೆ.

ಮಳೆಗಾಲದ ಪೂರ್ವಸಿದ್ಧತೆಯ ಭಾಗವಾಗಿ ಕೈಗೊಳ್ಳಲಾಗಿರುವ ಈ ಸ್ವಚ್ಛತಾ ಕಾರ್ಯದಿಂದ ನಗರದ ಪ್ರವಾಹ ನಿಯಂತ್ರಣ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ಸ್ಥಳೀಯ ನಿವಾಸಿಗಳು ಪಾಲಿಕೆಯ ಕ್ರಮವನ್ನು ಸ್ವಾಗತಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande