ತಂಬಾಕು ಮುಕ್ತ ಗದಗ ಜಿಲ್ಲೆಯ ನಿರ್ಮಾಣಕ್ಕೆ ಕರೆ
ಗದಗ, 04 ಜೂನ್ (ಹಿ.ಸ.) : ಆ್ಯಂಕರ್ : ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು “ಆಕರ್ಷಣೆಯನ್ನು ಬಹಿರಂಗಪಡಿಸುವುದು - ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಎದುರಿಸುವುದು” ಎಂಬ ಘೋಷವಾಕ್ಯದೊಂದಿಗೆ ಗದಗ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್
ಫೋಟೋ


ಗದಗ, 04 ಜೂನ್ (ಹಿ.ಸ.) :

ಆ್ಯಂಕರ್ : ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು “ಆಕರ್ಷಣೆಯನ್ನು ಬಹಿರಂಗಪಡಿಸುವುದು - ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಎದುರಿಸುವುದು” ಎಂಬ ಘೋಷವಾಕ್ಯದೊಂದಿಗೆ ಗದಗ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಜಿಲ್ಲಾ ಎನ್ಸಿಡಿ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ, ಗದಗದ ಎಸ್.ವಿ.ಟಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ, ಕಾನೂನು, ಪೊಲೀಸ್ ಹಾಗೂ ಶಿಕ್ಷಣ ಕ್ಷೇತ್ರದ ಪ್ರಮುಖ ಅಧಿಕಾರಿಗಳು, ತಜ್ಞರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡ್ರ ಅವರು ಉದ್ಘಾಟಿಸಿ ಮಾತನಾಡಿದರು. ತಂಬಾಕು ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲ, ಕುಟುಂಬ ಹಾಗೂ ಸಮಾಜದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ತಂಬಾಕು ಬಳಕೆಯಿಂದ ಉಂಟಾಗುವ ರೋಗಗಳು, ವಿಶೇಷವಾಗಿ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಈ ಕುರಿತು ನಿರಂತರ ಜಾಗೃತಿ ಅಗತ್ಯವಾಗಿದೆ ಎಂದು ಅವರು ತಿಳಿಸಿದರು. ಯುವ ಪೀಳಿಗೆಯನ್ನು ಸಂಪೂರ್ಣ ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜು ಮಟ್ಟದಲ್ಲಿ ಪರಿಣಾಮಕಾರಿ ಅರಿವು ಕಾರ್ಯಕ್ರಮಗಳು ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಜೊತೆಗೆ ತಂಬಾಕು ನಿಯಂತ್ರಣ ಕಾಯ್ದೆ ಅನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ತಂಬಾಕು ಮುಕ್ತ ಜಿಲ್ಲೆಯ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಅವರು ಕರೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ ಅವರು ಮಾತನಾಡಿ, ಈ ವರ್ಷದ ಘೋಷವಾಕ್ಯವು ತಂಬಾಕು ಉತ್ಪನ್ನಗಳ ಆಕರ್ಷಕ ಪ್ಯಾಕೇಜಿಂಗ್, ಬಣ್ಣಬಣ್ಣದ ವಿನ್ಯಾಸ, ಸುವಾಸನೆ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಯುವಜನರನ್ನು ಆಕರ್ಷಿಸಿ ವ್ಯಸನಕ್ಕೆ ದೂಡಲಾಗುತ್ತಿರುವ ವಾಸ್ತವತೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರು. ನಿಕೋಟಿನ್ ವ್ಯಸನವು ಶೀಘ್ರದಲ್ಲೇ ದೇಹದ ಅವಲಂಬನೆಗೆ ಕಾರಣವಾಗುತ್ತದೆ ಮತ್ತು ಅದರಿಂದ ಹೊರಬರುವುದು ಕಷ್ಟವಾಗುತ್ತದೆ ಎಂದು ಅವರು ವಿವರಿಸಿದರು.

ತಂಬಾಕು ಬಳಕೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ತಂಬಾಕಿನಲ್ಲಿರುವ ನಿಕೋಟಿನ್ ಅಂಶ ರಕ್ತನಾಳಗಳ ಮೂಲಕ ದೇಹದ ಎಲ್ಲಾ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳು, ತರಬೇತಿ ಶಿಬಿರಗಳು ಹಾಗೂ ಕೋಟ್ಪಾ ಕಾಯ್ದೆಯಡಿ ದಾಳಿಗಳು ನಡೆಸಲಾಗುತ್ತಿವೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ತಂಬಾಕು ವ್ಯಸನಿಗಳಿಗೆ ಚಿಕಿತ್ಸೆ ಹಾಗೂ ಸಮಾಲೋಚನೆ ನೀಡಲು ಜಿಲ್ಲಾ ಆಸ್ಪತ್ರೆಯ ರೂಂ ಸಂಖ್ಯೆ 189ರಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಉಚಿತ ಆಪ್ತ ಸಮಾಲೋಚನೆ ಹಾಗೂ ಔಷಧೋಪಚಾರ ಸೇವೆಗಳು ಲಭ್ಯವಿವೆ ಎಂದು ಅವರು ತಿಳಿಸಿದರು. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಂಡು ತಂಬಾಕು ವ್ಯಸನದಿಂದ ಮುಕ್ತರಾಗಬಹುದು ಎಂದು ಅವರು ಮನವಿ ಮಾಡಿದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಐ. ಸಜ್ಜನವರ ಅವರು ಮಾತನಾಡಿ, ಶಾಲೆಗಳ ಸುತ್ತಮುತ್ತ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಸಂಪೂರ್ಣ ನಿಷೇಧವಾಗಿದ್ದು, ಈ ನಿಯಮ ಉಲ್ಲಂಘನೆಯಾದರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರು 112 ಸಹಾಯವಾಣಿ ಮೂಲಕ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜೊತೆಗೆ ಡ್ರಗ್ ಫ್ರೀ ಆ್ಯಪ್ ಮೂಲಕ ಅಕ್ರಮ ಮಾದಕ ದ್ರವ್ಯಗಳ ಬಳಕೆ, ಸಂಗ್ರಹಣೆ ಹಾಗೂ ಮಾರಾಟ ಕುರಿತು ದೂರು ನೀಡುವ ವ್ಯವಸ್ಥೆಯೂ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.

ಎಸ್.ವಿ.ಟಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯ ವಿನಯ ಕುಬಸದ್ ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ಹೇಳಿದರು. ವಿದ್ಯಾರ್ಥಿಗಳು ಈ ಮಾಹಿತಿಯನ್ನು ತಮ್ಮ ಕುಟುಂಬ ಹಾಗೂ ಸಮಾಜದೊಂದಿಗೆ ಹಂಚಿಕೊಳ್ಳುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ್ ಚವ್ಹಾಣ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲಾ ಸುರಪುರ, ಬಸಮ್ಮ ಚಿತ್ತರಗಿ, ರೇಷ್ಮಾ ಎನ್. ನದಾಫ್, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರತಿನಿಧಿಗಳು, ಐಡಿಎಸ್ಪಿ ಡಾಟಾ ಮ್ಯಾನೇಜರ್ ವಿರೇಶ ಮದಕಟ್ಟಿ, ಶಿವಕುಮಾರ ಬಗಾಡೆ ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಎಂ. ರಬ್ಬನಗೌಡ, ಹಿ.ಆ.ನಿ ಅಧಿಕಾರಿಗಳು ಗದಗ ಅವರು ನಿರೂಪಿಸಿದರು. ಒಟ್ಟಿನಲ್ಲಿ ತಂಬಾಕು ಬಳಕೆಯ ಅಪಾಯಗಳ ಕುರಿತು ಸಮಗ್ರ ಅರಿವು ಮೂಡಿಸುವ ಮೂಲಕ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂಬ ಸಂದೇಶವನ್ನು ಕಾರ್ಯಕ್ರಮ ನೀಡಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande