




ಕೊಪ್ಪಳ, 04 ಜೂನ್ (ಹಿ.ಸ.) :
ಆ್ಯಂಕರ್ : ನಗರ ಪಕ್ಕದ ಬಸಾಪುರ ಕೆರೆ ಭೇಟಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳೊಂದಿಗೆ ನಾನು ಹೋದಾಗ ಬಲ್ಡೋಟ ಸೆಕ್ಯೂರಿಟಿ ಸಿಬ್ಬಂದಿ ಅಡ್ಡಗಟ್ಟಿದ್ದಾರೆ. ಅಲ್ಲದೆ 112 ನಂಬರಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿ ಕೆರೆಯಿಂದ ಹೊರ ಹಾಕಿ ಅವಮಾನಿಸಲು ಪ್ರಯತ್ನ ಮಾಡಿದ್ದು ಖಂಡನೀಯ ಎಂದು ರಾಜ್ಯ ಸಮಿತಿ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಅವರು ಅಸಮಾಧಾನ ಹೊರಹಾಕಿದರು.
ಇಲ್ಲಿನ ಜಿಲ್ಲಾಡಳಿತ ಕಾನೂನು, ಕೋರ್ಟ್ ಆದೇಶ ಉಲ್ಲಂಘಿಸಿರುವ ಕಂಪನಿ ಪರವಾಗಿ ನಿಲ್ಲಬಾರದು. ಕಾರ್ಖಾನೆಯ ವಶಕ್ಕೆ ಕೆರೆ ಒಪ್ಪಿಸಿದ ಕ್ರಮವು ಬಹಿರಂಗ ಕಾನೂನು ಮತ್ತು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಇದೊಂದು ಎಗ್ಗಿಲ್ಲದ ಅಧಿಕಾರ ದುರುಪಯೋಗದ ಪರಮಾವದಿಯಾಗಿದೆ ಎಂದು ಧರಣಿಯಲ್ಲಿ ಮಾತನಾಡಿ ಆಕ್ರೋಶ ಹೊರಹಾಕಿದರು.
ನೂತನ ಮುಖ್ಯಮಂತ್ರಿ ಗದ್ದುಗೆ ಏರಿದ ಡಿ.ಕೆ. ಶಿವಕುಮಾರ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆಯನ್ನು ರೈತರ ಜಾನುವಾರು ನೀರು ಕುಡಿಯಲು ಶೀಘ್ರವಾಗಿ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
217ನೇ ದಿನದ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟದ ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಜೆ. ಮಲ್ಲಿಕಾರ್ಜುನ ಸಿರಿಗೇರಿ, ಪ್ರಕಾಶಕ ಡಿ.ಎಂ.ಬಡಿಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರವಿ ಕಾಂತನವರ, ಶಿವಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಬಾವಿ, ಇಂಜಿನಿಯರ್ ವಿನಯ ಸಜ್ಜನ, ಉಮೇಶ ಗಣಪಾ ಕುಣಿಕೇರಿ, ಬಸವರಾಜ ಪೂಜಾರ ಕಾಸನಕಂಡಿ, ಮಖಬುಲ್ ರಾಯಚೂರು, ಮಹಾದೇವಪ್ಪ ಮಾವಿನಮಡು, ಹಳ್ಳೆರಾವ್ ಎಂ.ಜ್ಯೋಶಿ, ಶರಣು ಶೆಟ್ಟರ್, ವಿನೋದ ಕಿನ್ನಾಳ, ಕನಕರಾಯ ಕೆ.ಬಿ, ಹನುಮಂತರಾವ್, ರುದ್ರಪ್ಪ ಭಂಡಾರಿ, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ, ಅಭಿಜಿತ್ ಅಂಡಗಿ, ಲಕ್ಷ್ಮವ್ವ ಆಡಿನ, ಸುಮಾ ಕಮ್ಮಾರ, ಶಶಿಕಲಾ ಹೊಸಮನಿ, ಕನಕಮ್ಮ ಹೊಸಮನಿ, ಗಂಗಮ್ಮ ಕುರುಗೋಡು, ರತ್ನಮ್ಮ ದೊಡ್ಡಮನಿ ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್