
ಹಾಸನ, 30 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಹಾಸನ ಜಿಲ್ಲೆಯು 2026-27ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಮೊದಲನೇ ಸ್ಥಾನಗಳಿಸಲು ಕಾರ್ಯ ತಂತ್ರವಾಗಿ ಮತ್ತು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕೆ.ಎಸ್. ಲತಾಕುಮಾರಿ ಅವರು ಯಶಸ್ಸು-2.0 ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಬುನಾದಿ ಎನ್ನುವ ವಿನೂತ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.
ಈ ಕಾರ್ಯಕ್ರಮವು ಜುಲೈ-2026ರ ಮಾಸದಿಂದ ಡಿಸೆಂಬರ್ ಮಾಸದ ಅಂತ್ಯದ ವರೆಗೆ ಪ್ರತಿ ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಖುದ್ದು ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಅವರಿಂದ ವಿಷಯ ಮಂಡನೆ ಮತ್ತು ವಿವಿಧ ಕ್ಷೇತ್ರಗಳ ಗಣ್ಯ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಓದುವುದು ಹೇಗೆ? ರಸ್ತೆ ಸುರಕ್ಷತೆ, ಪೊಕ್ಸೋ ಕಾಯ್ದೆ-2012, ಎಸ್.ಎಸ್.ಎಲ್.ಸಿ. ನಂತರ ಮುಂದೇನು? ಬಾಲಕಾರ್ಮಿಕ ನಿಷೇಧ, ಮಕ್ಕಳ ಮಾನಸಿಕ ಆರೋಗ್ಯ ಕುರಿತು ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮವು ಆನ್ಲೈನ್ ಮುಖಾಂತರ ನಡೆಯಲಿದ್ದು ಪ್ರತಿ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸುವಂತೆ ಮತ್ತು ಸಂವಾದದಲ್ಲಿ ಪಾಲ್ಗೊಳ್ಳುವಂತೆ ಕ್ರಮವಹಿಸಲು ತಿಳಿಸಿದ್ದಾರೆ.
ಯಶಸ್ಸು-2.0 ಕಾರ್ಯಕ್ರಮವು ಪ್ರಸ್ತುತ ಸಾಲಿನಲ್ಲಿ ಜುಲೈ 3 ರಂದು ದೊಡ್ಡಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದ್ದು,ಜಿಲ್ಲಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.