
ಬೆಂಗಳೂರು, 30 ಜೂನ್ (ಹಿ.ಸ.) :
ಆ್ಯಂಕರ್ : ಗ್ರಾಮೀಣ ಬದುಕಿನ ಸೊಗಡನ್ನು ಆಧುನಿಕ ಕಲೆಯೊಂದಿಗೆ ಬೆಸೆದು ಜಾಗತಿಕ ಮಟ್ಟದಲ್ಲಿ ಕನ್ನಡ ನಾಡಿನ ಹೆಸರನ್ನು ಬೆಳಗಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ಸೋಮವಾರ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದರು. ಅವರ ನಿಧನದಿಂದ ಭಾರತೀಯ ಕಲಾ ಕ್ಷೇತ್ರವು ಅಪರೂಪದ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಂತಾಗಿದೆ.
1947ರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಡ ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಶಿವಪ್ರಸಾದ್ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಇತ್ತು. ಕುಟುಂಬದ ಆಶಯದಂತೆ ಅವರು ಇಂಜಿನಿಯರಿಂಗ್ ಶಿಕ್ಷಣ ಆರಂಭಿಸಿದ್ದರೂ, ಕಲೆಯ ಮೇಲಿನ ಒಲವಿನ ಕಾರಣ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿ ಮುಂಬೈನ ಪ್ರತಿಷ್ಠಿತ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ಗೆ ಸೇರಿದರು. 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದು ವೃತ್ತಿಪರ ಕಲಾವಿದರಾಗಿ ತಮ್ಮ ಪಯಣ ಆರಂಭಿಸಿದರು.
ಶಿವಪ್ರಸಾದ್ ಅವರು ಕೇವಲ ಚಿತ್ರಕಲಾವಿದರಾಗಿ ಮಾತ್ರ ಗುರುತಿಸಿಕೊಳ್ಳದೆ, ಸಮಾಜಮುಖಿ ಚಿಂತಕರಾಗಿಯೂ ಹೆಸರು ಗಳಿಸಿದ್ದರು. ಶೋಷಿತರು, ದಲಿತರು, ರೈತರು ಹಾಗೂ ಕೃಷಿ ಕಾರ್ಮಿಕರ ಬದುಕಿನ ನೋವು, ಹೋರಾಟ ಮತ್ತು ಅಸ್ತಿತ್ವವನ್ನು ತಮ್ಮ ಕಲಾಕೃತಿಗಳ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸಿದ್ದರು. ಸಮಾಜವಾದಿ, ದಲಿತ ಮತ್ತು ರೈತ ಚಳವಳಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಕಲೆಯನ್ನು ಸಾಮಾಜಿಕ ಬದಲಾವಣೆಯ ಸಾಧನವಾಗಿಯೂ ಬಳಸಿದ್ದರು.
ಅವರ ಕಲಾಕೃತಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ಪಡೆದಿದ್ದವು. ಬ್ರಿಟನ್ನ ಖ್ಯಾತ ಮಾಡರ್ನಿಸ್ಟ್ ಕಲಾವಿದ ಲುಸಿಯನ್ ಫ್ರಾಯ್ಡ್ ಅವರ ಶೈಲಿಗೆ ಹೋಲಿಕೆ ಮಾಡಲಾಗುತ್ತಿದ್ದ ಶಿವಪ್ರಸಾದ್ ಅವರ ಚಿತ್ರಗಳು ದೇಶ-ವಿದೇಶಗಳ ಅನೇಕ ಕಲಾ ಪ್ರದರ್ಶನಗಳಲ್ಲಿ ಪ್ರದರ್ಶನಗೊಂಡಿದ್ದವು. ಇಂಜಿನಿಯರಿಂಗ್ ಹಿನ್ನೆಲೆಯ ಕಾರಣ ಅವರು ಛಾಯಾಗ್ರಾಹಕ ಹಾಗೂ ಆರ್ಕಿಟೆಕ್ಚರಲ್ ಕನ್ಸಲ್ಟೆಂಟ್ ಆಗಿಯೂ ಗುರುತಿಸಿಕೊಂಡಿದ್ದರು.
1976ರಿಂದ ಬೆಂಗಳೂರು, ಮೈಸೂರು, ಮುಂಬೈ ಹಾಗೂ ನವದೆಹಲಿಯಲ್ಲಿ ಹಲವು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಿದ್ದರು. ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿ, ಚೆನ್ನೈನ ಸಾಕ್ಷಿ ಗ್ಯಾಲರಿ, ನವದೆಹಲಿಯ ಆರ್ಟ್ ಟುಡೇ ಸೇರಿದಂತೆ ದೇಶದ ಪ್ರಮುಖ ಕಲಾ ವೇದಿಕೆಗಳಲ್ಲಿ ಅವರ ಕೃತಿಗಳು ಪ್ರದರ್ಶನಗೊಂಡಿದ್ದವು. 1988ರ ಭೋಪಾಲ್ ಬಿನ್ನಾಲೆ, 1989ರ ಬಾಂಬೆ ಆರ್ಟ್ ಸೊಸೈಟಿ ಶತಮಾನೋತ್ಸವ ಪ್ರದರ್ಶನ ಹಾಗೂ 1996ರಲ್ಲಿ ಹಾಂಗ್ಕಾಂಗ್ನಲ್ಲಿ ನಡೆದ ಕಲಾ ಪ್ರದರ್ಶನಗಳಲ್ಲೂ ಅವರು ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು.
ಕಲಾ ಕ್ಷೇತ್ರಕ್ಕೆ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2001ರಲ್ಲಿ ಅವರಿಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ತಮ್ಮ ವಿಶಿಷ್ಟ ಕಲಾಶೈಲಿ, ಸಾಮಾಜಿಕ ಬದ್ಧತೆ ಮತ್ತು ಅಂತರರಾಷ್ಟ್ರೀಯ ಸಾಧನೆಗಳ ಮೂಲಕ ಕನ್ನಡ ನಾಡಿನ ಕಲಾ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ್ದ ಕೆ.ಟಿ. ಶಿವಪ್ರಸಾದ್ ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.