ಮಂಗಳೂರು : ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ
ನವದೆಹಲಿ, 30 ಜೂನ್ (ಹಿ.ಸ.) : ಆ್ಯಂಕರ್ : ಮಂಗಳೂರು ಕರಾವಳಿ ಸಮೀಪ ಅರಬ್ಬಿ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದ ಕಾರಣ ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ಆರು ಮೀನುಗಾರರನ್ನು ಭಾರತೀಯ ಕರಾವಳಿ ಕಾವಲು ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ಯಶಸ್ವಿಯಾಗಿ ರಕ್ಷಿಸಿದೆ. ಕರಾವಳಿ ಕಾವಲು ಪಡೆಯ
Rescue


ನವದೆಹಲಿ, 30 ಜೂನ್ (ಹಿ.ಸ.) :

ಆ್ಯಂಕರ್ : ಮಂಗಳೂರು ಕರಾವಳಿ ಸಮೀಪ ಅರಬ್ಬಿ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದ ಕಾರಣ ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ಆರು ಮೀನುಗಾರರನ್ನು ಭಾರತೀಯ ಕರಾವಳಿ ಕಾವಲು ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ಯಶಸ್ವಿಯಾಗಿ ರಕ್ಷಿಸಿದೆ.

ಕರಾವಳಿ ಕಾವಲು ಪಡೆಯ ಮಾಹಿತಿ ಪ್ರಕಾರ, 'ಮಂಜು ಮಾತಾ' ಹೆಸರಿನ ಮೀನುಗಾರಿಕಾ ದೋಣಿ ಸಮುದ್ರದ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಹಾನಿಗೊಳಗಾಗಿ, ಅದರೊಳಗೆ ನೀರು ನುಗ್ಗತೊಡಗಿತ್ತು. ಇದರಿಂದ ದೋಣಿಯಲ್ಲಿದ್ದ ಆರು ಸಿಬ್ಬಂದಿಯ ಜೀವ ಅಪಾಯಕ್ಕೆ ಸಿಲುಕಿತ್ತು.

ಜೂನ್ 29ರಂದು ಸಂಜೆ ಸುಮಾರು 4 ಗಂಟೆಗೆ, ಸುರತ್ಕಲ್ ಕರಾವಳಿಯಿಂದ ಸುಮಾರು 33 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಂಕಷ್ಟ ಸಂದೇಶವನ್ನು ಕರಾವಳಿ ಕಾವಲು ಪಡೆಯ 'ಸಚೇತ್' ಹಡಗು ಸ್ವೀಕರಿಸಿತು. ಸಂದೇಶ ದೊರೆಯುತ್ತಿದ್ದಂತೆಯೇ ಹಡಗಿನ ಮಾರ್ಗ ಬದಲಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.

ಸುಮಾರು 90 ನಿಮಿಷಗಳಲ್ಲೇ ರಕ್ಷಣಾ ತಂಡ ಅಪಾಯದಲ್ಲಿದ್ದ ದೋಣಿಯನ್ನು ತಲುಪಿತು. ಈ ವೇಳೆ ಸಮುದ್ರದಲ್ಲಿ ಭಾರೀ ಅಲೆಗಳು, ಬಲವಾದ ಗಾಳಿ, ಕಡಿಮೆ ಗೋಚರತೆ ಹಾಗೂ ಕತ್ತಲೆ ಆವರಿಸಿದ್ದರಿಂದ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು.

ಆದರೂ ಕರಾವಳಿ ಕಾವಲು ಪಡೆಯ ಸಿಬ್ಬಂದಿ ತಮ್ಮ ಪರಿಣತಿ ಮತ್ತು ಆಧುನಿಕ ತಂತ್ರಜ್ಞಾನದ ನೆರವಿನಿಂದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು. ವಿಶೇಷವಾಗಿ ಪ್ರತಿಕೂಲ ಸಮುದ್ರ ಪರಿಸ್ಥಿತಿಯಲ್ಲಿ ಬಳಸಲು ವಿನ್ಯಾಸಗೊಳಿಸಲಾದ ದೂರ ನಿಯಂತ್ರಿತ ಜೀವ ರಕ್ಷಕ ಸಾಧನಗಳನ್ನು ಬಳಸಿ ಮೀನುಗಾರರನ್ನು ಸುರಕ್ಷಿತವಾಗಿ ಹೊರತೆಗೆದರು.

ಸಂಜೆ 6 ಗಂಟೆಯ ವೇಳೆಗೆ ಎಲ್ಲಾ ಆರು ಮಂದಿ ಮೀನುಗಾರರನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸಲಾಯಿತು. ಬಳಿಕ ಅವರನ್ನು ಮುಂದಿನ ಕ್ರಮಗಳಿಗಾಗಿ ನ್ಯೂ ಮಂಗಳೂರು ಬಂದರಿಗೆ ಕರೆತರಲಾಯಿತು.

ಭಾರತೀಯ ಕರಾವಳಿ ಕಾವಲು ಪಡೆಯ ಈ ಕಾರ್ಯಾಚರಣೆಯು ಪ್ರತಿಕೂಲ ಹವಾಮಾನ ಮತ್ತು ತುರ್ತು ಸಮುದ್ರ ಪರಿಸ್ಥಿತಿಗಳಲ್ಲಿಯೂ ಸಿಬ್ಬಂದಿಯ ಧೈರ್ಯ, ವೃತ್ತಿಪರತೆ, ಸಮನ್ವಯ ಹಾಗೂ ಆಧುನಿಕ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕರಾವಳಿ ಕಾವಲು ಪಡೆ ಸಮುದ್ರ ಪ್ರದೇಶದಲ್ಲಿ ನಿರಂತರ ನಿಗಾ ವಹಿಸಿ, ಸಂಕಷ್ಟದಲ್ಲಿರುವ ಮೀನುಗಾರರು ಹಾಗೂ ನಾವಿಕರಿಗೆ ಸಕಾಲದಲ್ಲಿ ನೆರವು ಒದಗಿಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande