ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ ; ತಪ್ಪಿದ ಭಾರಿ ಅನಾಹುತ
ದಾವಣಗೆರೆ, 30 ಜೂನ್ (ಹಿ.ಸ.) : ಆ್ಯಂಕರ್ : ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಶಸ್ತ್ರಚಿಕಿತ್ಸೆ ಆರಂಭಕ್ಕೂ ಮುನ್ನ ಆಪರೇಷನ್ ಥಿಯೇಟರ್ನಲ್ಲಿದ್ದ ಅನಸ್ತೇಶಿಯಾ ವರ್ಕ್ಸ್ಟೇಷನ್ನಲ್ಲಿ ತಾಂತ್ರಿಕ ದೋಷ ಉಂಟಾಗಿ
Fire


ದಾವಣಗೆರೆ, 30 ಜೂನ್ (ಹಿ.ಸ.) :

ಆ್ಯಂಕರ್ : ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಶಸ್ತ್ರಚಿಕಿತ್ಸೆ ಆರಂಭಕ್ಕೂ ಮುನ್ನ ಆಪರೇಷನ್ ಥಿಯೇಟರ್ನಲ್ಲಿದ್ದ ಅನಸ್ತೇಶಿಯಾ ವರ್ಕ್ಸ್ಟೇಷನ್ನಲ್ಲಿ ತಾಂತ್ರಿಕ ದೋಷ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಆಮ್ಲಜನಕ (ಆಕ್ಸಿಜನ್) ವ್ಯವಸ್ಥೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಬೆಂಕಿ ಕ್ಷಣಾರ್ಧದಲ್ಲೇ ಆಪರೇಷನ್ ಥಿಯೇಟರ್ 5 ಮತ್ತು 6ಕ್ಕೆ ವ್ಯಾಪಿಸಿದ್ದು, ಅಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣಗಳು, ಅನಸ್ತೇಶಿಯಾ ಮಿಷನ್, ಶಸ್ತ್ರಚಿಕಿತ್ಸಾ ಉಪಕರಣಗಳು ಸೇರಿದಂತೆ ಹಲವು ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಬೆಂಕಿಯ ಜ್ವಾಲೆ ಸಮೀಪದ ಕೊಠಡಿಗಳಿಗೂ ವ್ಯಾಪಿಸಿದ್ದರಿಂದ ಆಸ್ಪತ್ರೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆ ಸಂಭವಿಸಿದ ವೇಳೆ ಆಪರೇಷನ್ ಥಿಯೇಟರ್ನಲ್ಲಿ 10ಕ್ಕೂ ಹೆಚ್ಚು ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಅನಸ್ತೇಶಿಯಾ ಯಂತ್ರದಲ್ಲಿ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡ ತಕ್ಷಣ ಸಿಬ್ಬಂದಿ ಎಚ್ಚೆತ್ತುಕೊಂಡು ಆಪರೇಷನ್ ಥಿಯೇಟರ್ನಿಂದ ಹೊರಗೆ ಓಡಿದ್ದಾರೆ. ಅಲ್ಲದೆ, ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿದ್ದ ರೋಗಿಗಳನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಸಾಕಷ್ಟು ಸಮಯದ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಘಟನಾ ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಸರ್ಜನ್ ಹಾಗೂ ಡಿಎಚ್ಒ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಪರಿಶೀಲಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande