ಎಸ್ ಐ ಆರ್ ಕುರಿತು ಮುಖ್ಯ ನ್ಯಾಯಮೂರ್ತಿಗೆ ಇಂಡಿಯಾ ಮೈತ್ರಿಕೂಟದ ಜಂಟಿ ಪತ್ರ
ನಾನಾ
ಜೈರಾಮ್ ರಮೇಶ್


ನವದೆಹಲಿ, 30 ಜೂನ್ (ಹಿ.ಸ.) :

ಆ್ಯಂಕರ್ : ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತದಾರರ ಪಟ್ಟಿ ಮರುಪರಿಶೀಲನೆ ಪ್ರಕ್ರಿಯೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ನಾನಾ ವಿಷಯಗಳ ಕುರಿತು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಮುಖ್ಯ ನ್ಯಾಯಮೂರ್ತಿಗೆ ಜಂಟಿ ಪತ್ರ ರವಾನಿಸಿದೆ.

ಇಂಡಿಯಾ ಮೈತ್ರಿಕೂಟದ 23 ರಾಜಕೀಯ ಪಕ್ಷಗಳು ಹಾಗೂ ಒಬ್ಬ ಪಕ್ಷೇತರ ಸಂಸದರ ಸಹಿಯಿರುವ ಈ ಪತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ, ಚುನಾವಣಾ ಪಾರದರ್ಶಕತೆ ಮತ್ತು ಮತದಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ನ್ಯಾಯಾಂಗದ ಗಮನಕ್ಕೆ ತರಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಜೂನ್ 8ರಂದು ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಮರುಪರಿಶೀಲನೆ ಪ್ರಕ್ರಿಯೆ ಹಾಗೂ ಚುನಾವಣಾ ವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ದೇಶದ ಮುಖ್ಯ ನ್ಯಾಯಮೂರ್ತಿಗೆ ಜಂಟಿ ಪತ್ರ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

ಆ ಸಭೆಯಲ್ಲಿ 21 ರಾಜಕೀಯ ಪಕ್ಷಗಳು ಮತ್ತು ಒಬ್ಬ ಪಕ್ಷೇತರ ಸದಸ್ಯ ಭಾಗವಹಿಸಿದ್ದರು. ಬಳಿಕ ಇನ್ನೂ ಕೆಲವು ಪಕ್ಷಗಳು ಬೆಂಬಲ ಸೂಚಿಸಿದ ಪರಿಣಾಮ, ಅಂತಿಮವಾಗಿ 23 ರಾಜಕೀಯ ಪಕ್ಷಗಳು ಹಾಗೂ ಒಬ್ಬ ಪಕ್ಷೇತರ ಸದಸ್ಯರ ಸಹಿಯೊಂದಿಗೆ ಪತ್ರವನ್ನು ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿವೆ. ಚುನಾವಣಾ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ, ನ್ಯಾಯಸಮ್ಮತ ಹಾಗೂ ವಿಶ್ವಾಸಾರ್ಹವಾಗಿರಬೇಕೆಂಬ ಉದ್ದೇಶದಿಂದಲೇ ಈ ಜಂಟಿ ಮನವಿಯನ್ನು ಸಲ್ಲಿಸಲಾಗಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಗೆ ಸಂಬಂಧಿಸಿದ ವಿಷಯಗಳಲ್ಲಿ ಸೂಕ್ತ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಯ ಮಧ್ಯಸ್ಥಿಕೆಯನ್ನು ಕೋರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande