
ಬೆಂಗಳೂರು, 30 ಜೂನ್ (ಹಿ.ಸ.) :
ಆ್ಯಂಕರ್ : ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಉಸ್ತುವಾರಿಗಳ ಸಭೆ ನಡೆಸಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್), ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಬಿಎ ಚುನಾವಣೆಯನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಬಿಜೆಪಿ ಐದು ಮಹಾನಗರ ಪಾಲಿಕೆಗಳನ್ನು ಗೆಲ್ಲುವ ಗುರಿಯೊಂದಿಗೆ ಈಗಾಗಲೇ ಸಿದ್ಧತೆ ಆರಂಭಿಸಿದೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿಗೆ ಕಾಂಗ್ರೆಸ್ ಸರ್ಕಾರ ಮಾಡಿರುವ ಅನ್ಯಾಯ, ರಸ್ತೆಗುಂಡಿಗಳ ಸಮಸ್ಯೆ, ತೆರಿಗೆ ಹೆಚ್ಚಳ ಸೇರಿದಂತೆ ವಿವಿಧ ಜನಸಮಸ್ಯೆಗಳನ್ನು ಜನರ ಮುಂದಿಡಲು ವಿಶೇಷ ಸಮಿತಿಯನ್ನು ರಚಿಸಲಾಗುತ್ತಿದೆ. ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲು ಪ್ರತ್ಯೇಕ ಸಮಿತಿಯನ್ನೂ ರಚಿಸಲಾಗುತ್ತಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ತಾವು ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾರು ಏನೇ ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಅಧಿಕಾರ ಪಕ್ಷದ ರಾಷ್ಟ್ರೀಯ ವರಿಷ್ಠರಿಗೆ ಮಾತ್ರ ಇದೆ. ಈ ಕುರಿತು ಊಹಾಪೋಹಗಳಿಗೆ ಅವಕಾಶವಿಲ್ಲ ಎಂದು ಹೇಳಿದರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಎಸ್.ಆರ್. ವಿಶ್ವನಾಥ್ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಈ ವಿಚಾರವನ್ನು ಪಕ್ಷ ಈಗಾಗಲೇ ಅಲ್ಲಿಗೇ ಮುಕ್ತಾಯಗೊಳಿಸಿದೆ. ಆ ರೀತಿಯ ಹೇಳಿಕೆಗಳನ್ನು ಯಾರೂ ನೀಡಬಾರದು ಎಂಬ ಸಂದೇಶವನ್ನು ಪಕ್ಷದಿಂದ ನೀಡಲಾಗಿದೆ. ಅವರು ಪಕ್ಷವೇ ಮುಖ್ಯ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದು, ಈ ವಿಷಯವನ್ನು ಮತ್ತಷ್ಟು ಮುಂದುವರಿಸುವುದಿಲ್ಲ ಎಂದರು.
ಧರ್ಮಸ್ಥಳದಲ್ಲಿ ಆಣೆ–ಪ್ರಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ವಿಷಯದಲ್ಲಿ ಯಾವುದೇ ಶಾಸಕರು ಧರ್ಮಸ್ಥಳಕ್ಕೆ ಹೋಗುವ ಅಗತ್ಯವಿಲ್ಲ. ಪಕ್ಷದ ವಿರುದ್ಧ ಅಡ್ಡ ಮತದಾನ ಮಾಡಿರುವವರ ವಿರುದ್ಧ ಬಿಜೆಪಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಿದೆ. ಅಂತಹವರ ರಾಜಕೀಯ ಭವಿಷ್ಯದ ಬಗ್ಗೆ ಪಕ್ಷವೇ ತೀರ್ಮಾನ ಕೈಗೊಳ್ಳಲಿದ್ದು, ಮುಂದೆ ಅವರು ಚುನಾವಣೆಗೆ ಸ್ಪರ್ಧಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.