
ಕೊಪ್ಪಳ, 03 ಜೂನ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ನೋಂದಣಿಯಾಗಿದ್ದ ಹಸಿಮೆಣಸಿನಕಾಯಿ ಬೆಳೆ ವಿಮಾ ಅರ್ಜಿಗಳನ್ನು ಮರುಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಪರಿಹಾರ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಕೊಪ್ಪಳ ತೋಟಗಾರಿಕೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡುವಳಿ ಪ್ರಕಾರ 2025-26ನೇ ಸಾಲಿನ ಮರುವಿನ್ಯಾಸಗೊಳಿಸಿದ ಆಧಾರಿತ ಬೆಳೆ ವಿಮಾ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಹಸಿಮೆಣಸಿನಕಾಯಿ ಬೆಳೆ ನೋಂದಣಿಯಾಗಿದ್ದು, ಹಸಿಮೆಣಸಿನಕಾಯಿ ಬೆಳೆ ಕ್ಷೇತ್ರಗಳು ವಾಸ್ತವಿಕ ಬಿತ್ತನೆ ಕ್ಷೇತ್ರಕ್ಕಿಂತ ಹೆಚ್ಚಿರುವುದು ಕಂಡುಬಂದ ಪ್ರಯುಕ್ತ ಪ್ರಾದೇಶಿಕ ವ್ಯವಸ್ಥಾಪಕರು, ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಬೆಂಗಳೂರು ರವರು ನೋಂದಣಿಯಾದ ಎಲ್ಲಾ ಅರ್ಜಿಗಳನ್ನು ಕ್ರಾಪ್ ಹೆಲ್ತ್ ಮಾನಿಟೆರಿಂಗ್ (Crop Health Monitering) ನ್ನು ಎಐಸಿ ಫಾರ್ಮ್ ಆ್ಯಪ್ (AIC Form App) ಮೂಲಕ ಶೇ. 100ರಷ್ಟು ಕ್ಷೇತ್ರ ಪರಿಶೀಲನೆ ಕೈಗೊಳ್ಳಲಾಗಿ, ಶೇ. 90.42ರಷ್ಟು ನೋಂದಾಯಿತ ಪ್ರದೇಶಗಳಲ್ಲಿ ಹಸಿಮೆಣಸಿನಕಾಯಿ ಬೆಳೆ ಕಂಡುಬಂದಿಲ್ಲವೆಂದು ವರದಿ ಸಲ್ಲಿಸಿರುತ್ತಾರೆ.
ಈ ವರದಿ ಅನುಸಾರ ತೋಟಗಾರಿಕೆ ಇಲಾಖೆಯ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ವತಿಯಿಂದ ಬೆಳೆ ಸಮೀಕ್ಷೆ ವರದಿ ಅನುಸಾರ ಬೆಳೆ ದರ್ಶಕ ತಂತ್ರಾಂಶದ ಮುಖಾಂತರ ಎಲ್ಲಾ ಹೋಬಳಿ ಮಟ್ಟದ ಅಧಿಕಾರಿಗಳು ಯಾದೃಚ್ಛಿಕ ಮಾದರಿಯ ಅನುಸಾರ ಬೆಳೆ ನೋಂದಾಯಿಸಿದ ರೈತರ ಜಮೀನುಗಳಲ್ಲಿ ಶೇ.25 ರಂತೆ ಪರಿಶೀಲನೆ ಕೈಗೊಂಡು ಮಾರ್ಗಸೂಚಿ ನಿಯಮಾನುಸಾರ ತಾಲ್ಲೂಕಿನ ಸಂಬಂಧಪಟ್ಟ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕಿನ ಬೆಳೆ ಸಮೀಕ್ಷೆ ಸಮಿತಿಯೊಂದಿಗೆ ಸಭೆ ನಡೆಸಿ, ಜಂಟಿ ಪರಿಶೀಲನಾ ವರದಿಯನ್ನು ದೃಡೀಕರಿಸಿ ಸಲ್ಲಿಸಲು ಸೂಚಿಸಲಾಗಿರುತ್ತದೆ.
ಜಂಟಿ ಪರಿಶೀಲನೆಯಲ್ಲಿ ಕೊಪ್ಪಳ ತಾಲೂಕಿನಲ್ಲಿ ನೋಂದಾಯಿತ 582 ಅರ್ಜಿಗಳ ಪೈಕಿ 64 ಸರ್ವೇ ನಂಬರಗಳಲ್ಲಿ ಮಾತ್ರ ಹಸಿಮೆಣಸಿನಕಾಯಿ ಬಿತ್ತನೆಯಾಗಿದ್ದು ಕಂಡು ಬಂದಿರುತ್ತದೆ. ಅದೇ ರೀತಿ ಕನಕಗಿರಿ ತಾಲೂಕಿನಲ್ಲಿ 36 ಅರ್ಜಿಗಳ ಪೈಕಿ 3 ಸರ್ವೇ ನಂಬರಗಳಲ್ಲಿ, ಕುಕನೂರು ತಾಲೂಕಿನಲ್ಲಿ 762 ಅರ್ಜಿಗಳ ಪೈಕಿ 194 ಸರ್ವೇ ನಂಬರಗಳಲ್ಲಿ, ಯಲಬುರ್ಗಾ ತಾಲೂಕಿನಲ್ಲಿ 260 ಅರ್ಜಿಗಳ ಪೈಕಿ 80 ಸರ್ವೇ ನಂಬರಗಳಲ್ಲಿ ಮತ್ತು ಕುಷ್ಟಗಿ ತಾಲೂಕಿನಲ್ಲಿ 646 ಅರ್ಜಿಗಳ ಪೈಕಿ 91 ಸರ್ವೇ ನಂಬರಗಳಲ್ಲಿ ಸೇರಿದಂತೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ನೋಂದಣಿಯಾದ 2286 ಅರ್ಜಿಗಳ ಪೈಕಿ ಕೇವಲ 432 ಸರ್ವೇ ನಂಬರಗಳಲ್ಲಿ ಮಾತ್ರ ಹಸಿಮೆಣಸಿನಕಾಯಿ ಬೆಳೆ ಬಿತ್ತನೆಯಾಗಿರುವುದು ಕಂಡುಬಂದಿದೆ. ಇನ್ನುಳಿದ 1854 ಸರ್ವೇ ನಂಬರ್ಗಳಲ್ಲಿ ನೋಂದಣಿಯಾದ ಹಸಿಮೆಣಸಿನಕಾಯಿ ಬೆಳೆ ಕಂಡು ಬಂದಿರುವುದಿಲ್ಲ.
ಈ ಮಾಹಿತಿಯನ್ನು ಎಲ್ಲಾ ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಸೂಚನಾ ಫಲಕದಲ್ಲಿ ನಮೋದಿಸಲಾಗಿರುತ್ತದೆ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಮುಖ್ಯ ದಿನಪತ್ರಕೆಯಲ್ಲಿ ವರದಿ ಪ್ರಕಟಿಸಿ ಬೆಳೆ ನೋಂದಾಯಿಸಿದ ರೈತರಿಂದ ಯಾವುದೇ ತರಹ ಆಕ್ಷೇಪಣೆ ಸಲ್ಲಿಸುವುದಕ್ಕೆ 10 ದಿನಗಳ ಕಾಲ ಅವಕಾಶ ನೀಡಲಾಗಿತ್ತು. ತದನಂತರ ಯಲಬುರ್ಗಾ ತಾಲೂಕಿನಿಂದ 5 ಅಕ್ಷೇಪಣೆಗಳು ಮತ್ತು ಕುಕನೂರು ತಾಲೂಕಿನಿಂದ 6 ಅಕ್ಷೇಪಣೆಗಳು ಬಂದಿದ್ದು, ಈ ಅಕ್ಷೇಪಣೆಗಳನ್ನು ತಹಶಿಲ್ದಾರ ರವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿಸಿ, ಸಂಬಂದಪಟ್ಟ ರೈತರಿಂದ ದಾಖಾಲಾತಿಗಳನ್ನು ಪಡೆದು ಕ್ರಮ ವಹಿಸಲಾಗಿರುತ್ತದೆ. ಇತರೆ ತಾಲೂಕಿನಿಂದ ಯಾವುದೆ ಆಕ್ಷೇಪಣೆ ದೂರು ಸ್ವಿಕಾರವಾಗಿರುವುದಿಲ್ಲ.
ಈ ಬೆಳೆ ಸಮೀಕ್ಷೆ ಜಂಟಿ ಪರಿಶೀಲನಾ ವರದಿಯನ್ನು ಸಂಬಂದಪಟ್ಟ ತಾಲೂಕಿನ ಬೆಳೆ ಸಮೀಕ್ಷೆ ಸಮಿತಿಯೊಂದಿಗೆ ಆಯಾ ತಾಲ್ಲೂಕ ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ಸಭೆ ಕೈಗೊಂಡು ಅನುಮೊದನೆ ಪಡೆದುಕೊಂಡು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ಈ ಪ್ರಯುಕ್ತ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆ ನಡುವಳಿ ಪ್ರಕಾರ ಬೆಳೆ ವಿಮಾ ಯೋಜನೆಯನ್ನು ಮಾರ್ಗಸೂಚಿ ಅನುಸಾರ ಸಮರ್ಪಕವಾಗಿ ಅನುμÁ್ಟನಗೊಳಿಸುವುದಕ್ಕೆ ಮತ್ತು ಬೆಳೆ ಪರಿಹಾರ ಮೊತ್ತವು ಅರ್ಹ ಫಲಾನುಭವಿಗಳಿಗೆ ಮಾತ್ರ ಸಿಗಬೇಕು. ಯಾವುದೇ ಮಧ್ಯವರ್ತಿಗಳ ಹಾವಳಿಯಿಂದ ಅರ್ಹ ರೈತರಿಗೆ ವಂಚನೆ ಆಗಬಾರದು ಹಾಗೂ ತಪ್ಪು ವರದಿ ನೀಡಿ ಕರ್ತವ್ಯ ಲೋಪ ಮಾಡುತ್ತಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಕೊಪ್ಪಳ ತೋಟಗಾರಿಕೆ ಜಂಟಿ ನಿರ್ದೇಶಕರ ಕಾರ್ಯಾಲಯದ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್