
ಬಾಗಲಕೋಟೆ, 03 ಜೂನ್ (ಹಿ.ಸ.) :
ಆಂಕರ್ : ಸಾರ್ವಜನಿಕರ ಕಳೆದುಹೋದ ಹಾಗೂ ಕಳುವಾಗಿದ್ದ ಮೊಬೈಲ್ ಗಳನ್ನು ಪತ್ತೆ ಹಚ್ಚುವಲ್ಲಿ ಬಾಗಲಕೋಟೆ ಜಿಲ್ಲೆಯ
ಮಹಾಲಿಂಗಪುರ ಪೊಲೀಸರು ಮತ್ತೊಮ್ಮೆ ಯಶಸ್ಸು ಸಾಧಿಸಿದ್ದು, ಪತ್ತೆಯಾದ 30 ಮೊಬೈಲ್ ಗಳನ್ನು ಅವುಗಳ ನೈಜ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಕಳುವಾಗಿದ್ದ ಹಾಗೂ ಕಳೆದುಹೋದ ಮೊಬೈಲ್ ಗಳ ಕುರಿತು ಸಂಬಂಧಿಸಿದ ಮಾಲೀಕರು ಕೇಂದ್ರ ಸರ್ಕಾರದ ಸಿಇಐಆರ್ (CEIR - Central Equipment Identity Register) ಪೋರ್ಟಲ್ ಮೂಲಕ ದೂರು ದಾಖಲಿಸಿದ್ದರು.
ದೂರುಗಳ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ತಾಂತ್ರಿಕ ಮಾಹಿತಿಗಳನ್ನು ಬಳಸಿ ಮೊಬೈಲ್ ಗಳನ್ನು ಜಾಡು ಪತ್ತೆ ಹಚ್ಚಿ ಅವುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಪೊಲೀಸರ ನಿರಂತರ ಪರಿಶ್ರಮ ಮತ್ತು ತಾಂತ್ರಿಕ ತನಿಖೆಯ ಫಲವಾಗಿ ಪತ್ತೆಯಾದ ಸುಮಾರು 30 ಮೊಬೈಲ್ ಗಳನ್ನು ಠಾಣೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಆಯಾ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಹಲವು ತಿಂಗಳುಗಳಿಂದ ತಮ್ಮ ಮೊಬೈಲ್ ಗಳನ್ನು ಕಳೆದುಕೊಂಡು ನಿರಾಶರಾಗಿದ್ದ ಸಾರ್ವಜನಿಕರು ತಮ್ಮ ಅಮೂಲ್ಯ ಮೊಬೈಲ್ ಗಳನ್ನು ಮರಳಿ ಪಡೆದ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಮೊಬೈಲ್ ಕಳೆದುಹೋದ ತಕ್ಷಣವೇ ಸಾರ್ವಜನಿಕರು CEIR ಪೋರ್ಟಲ್ನಲ್ಲಿ ದೂರು ದಾಖಲಿಸುವುದರಿಂದ ಮೊಬೈಲ್ ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಮೊಬೈಲ್ IMEI ಸಂಖ್ಯೆಯನ್ನು ಸುರಕ್ಷಿತವಾಗಿ ದಾಖಲಿಸಿಕೊಂಡಿರಬೇಕು ಹಾಗೂ ಮೊಬೈಲ್ ಕಳೆದುಹೋದರೆ ಕೂಡಲೇ ಪೊಲೀಸ್ ಠಾಣೆ ಮತ್ತು CEIR ಪೋರ್ಟಲ್ಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಡಿವೈಎಸ್ಪಿ ಸೈಯದ್ ಜಮೀರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮಹಾಲಿಂಗಪುರ ಪೊಲೀಸರ ಈ ಕಾರ್ಯಾಚರಣೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದು, ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯಲು ತಂತ್ರಜ್ಞಾನದ ಸದ್ಬಳಕೆ ಹೇಗೆ ಸಹಕಾರಿಯಾಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande