ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಎಲ್ಲ ವರ್ಗಗಳಿಗೂ ಸ್ಥಾನ
ನಾನಾ
ಸಚಿವರ ಪಟ್ಟಿ


ಬೆಂಗಳೂರು, 03 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಮೊದಲ ಸಚಿವ ಸಂಪುಟದಲ್ಲಿ ಪ್ರಮುಖ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ಹಾಗೂ ರಾಜಕೀಯ ಸಮತೋಲನ ಸಾಧಿಸಲು ಕಾಂಗ್ರೆಸ್ ನಾಯಕತ್ವ ಮುಂದಾಗಿದೆ.

ಒಕ್ಕಲಿಗ, ಲಿಂಗಾಯತ, ದಲಿತ, ಕುರುಬ, ಅಲ್ಪಸಂಖ್ಯಾತ, ರೆಡ್ಡಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯದ ನಾನಾ ವರ್ಗಗಳ ಆಶೋತ್ತರಗಳಿಗೆ ಸ್ಪಂದಿಸುವ ಪ್ರಯತ್ನ ನಡೆಸಲಾಗಿದೆ.

ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿಸಲಿದ್ದು, ಒಕ್ಕಲಿಗ ಸಮುದಾಯಕ್ಕೆ ರಾಜ್ಯದ ಅತ್ಯುನ್ನತ ಹುದ್ದೆ ದೊರೆತಿದೆ. ಉಪಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ್ ಅವರಿಗೆ ಅವಕಾಶ ಕಲ್ಪಿಸಲಾಗಿದ್ದು, ದಲಿತ ಸಮುದಾಯಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ.

ಸಂಪುಟದಲ್ಲಿ ಲಿಂಗಾಯತ ಸಮುದಾಯದಿಂದ ಎಂ.ಬಿ. ಪಾಟೀಲ್, ಶರಣಪ್ರಕಾಶ್ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಅವರಿಗೆ ಸಚಿವ ಸ್ಥಾನ ಲಭಿಸಿದೆ. ದಲಿತ ಸಮುದಾಯದಿಂದ ಕೆ.ಎಚ್. ಮುನಿಯಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದಾರೆ. ಹೀಗಾಗಿ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ನಂತರದ ಪ್ರಮುಖ ಹುದ್ದೆಗಳೊಂದಿಗೆ ಸಮರ್ಪಕ ಪ್ರಾತಿನಿಧ್ಯ ದೊರೆತಿದೆ.

ಅಲ್ಪಸಂಖ್ಯಾತ ಸಮುದಾಯದಿಂದ ಯು.ಟಿ. ಖಾದರ್, ಕ್ರೈಸ್ತ ಸಮುದಾಯದಿಂದ ಕೆ.ಜೆ. ಜಾರ್ಜ್, ರೆಡ್ಡಿ ಸಮುದಾಯದಿಂದ ರಾಮಲಿಂಗಾರೆಡ್ಡಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದಿಂದ ಸತೀಶ್ ಜಾರಕಿಹೊಳಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಕುರುಬ ಸಮುದಾಯದಿಂದ ಯತೀಂದ್ರ ಸಿದ್ದರಾಮಯ್ಯ ಹಾಗೂ ಬೈರತಿ ಸುರೇಶ್ ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಒಕ್ಕಲಿಗ ಸಮುದಾಯದಿಂದ ಕೃಷ್ಣ ಬೈರೇಗೌಡ ಕೂಡ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸೇರಿದಂತೆ ಒಕ್ಕಲಿಗ ಸಮುದಾಯಕ್ಕೆ ಎರಡು ಸ್ಥಾನಗಳು ಲಭಿಸಿವೆ.

ಸಮುದಾಯವಾರು ಲೆಕ್ಕಾಚಾರದಲ್ಲಿ ಲಿಂಗಾಯತ ಸಮುದಾಯಕ್ಕೆ ಮೂರು ಸ್ಥಾನಗಳು ದೊರೆತಿದ್ದು, ದಲಿತ ಸಮುದಾಯಕ್ಕೂ ಮೂರು ಸ್ಥಾನಗಳು ಲಭಿಸಿವೆ.

ಒಕ್ಕಲಿಗ ಮತ್ತು ಕುರುಬ ಸಮುದಾಯಗಳಿಗೆ ತಲಾ ಎರಡು ಸ್ಥಾನಗಳು ದೊರೆತಿವೆ. ಮುಸ್ಲಿಂ ಅಲ್ಪಸಂಖ್ಯಾತ, ಕ್ರೈಸ್ತ, ರೆಡ್ಡಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ತಲಾ ಒಂದು ಸ್ಥಾನ ನೀಡಲಾಗಿದೆ.

ರಾಜ್ಯದ ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಸಾಧಿಸಲು ಕಾಂಗ್ರೆಸ್ ಪ್ರಯತ್ನಿಸಿರುವುದು ಈ ಸಚಿವ ಸಂಪುಟ ರಚನೆಯಿಂದ ಸ್ಪಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಸಚಿವರಿಗೆ ಖಾತೆ ಹಂಚಿಕೆ ನಡೆದ ಬಳಿಕ ಆಡಳಿತಾತ್ಮಕ ಜವಾಬ್ದಾರಿಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande