ಗದಗದಲ್ಲಿ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಯ್ಕೆಗೆ ಸಂಭ್ರಮಾಚರಣೆ
ಗದಗ, 03 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ನಡೆಸಿದರು. ನಗರದ ವಾಯ್.ಎಚ್. ಪರಾಪೂರ ಕಚೇರಿ ಮುಂಭಾಗದಲ್ಲಿ ನಡೆದ ಕ
ಫೋಟೋ


ಗದಗ, 03 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ನಡೆಸಿದರು. ನಗರದ ವಾಯ್.ಎಚ್. ಪರಾಪೂರ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಘಟ್ಟವೆಂದು ಪರಿಗಣಿಸಲಾಗುತ್ತಿರುವ ಈ ಸಂದರ್ಭದಲ್ಲಿ, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಡಾ. ಜಿ. ಪರಮೇಶ್ವರ ಅವರ ಪರವಾಗಿ ಕಾರ್ಯಕರ್ತರು ಜಯಘೋಷಣೆ ಕೂಗಿದರು. ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಪಕ್ಷದ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ರಾಜ್ಯದ ಅಭಿವೃದ್ಧಿಗೆ ಈ ನಾಯಕತ್ವ ಹೊಸ ದಿಕ್ಕು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಡಿ.ಕೆ. ಶಿವಕುಮಾರ ಅವರು ವಹಿಸಿರುವ ಪಾತ್ರ ಅಪಾರವಾಗಿದ್ದು, ಅವರ ನಾಯಕತ್ವದಲ್ಲಿ ರಾಜ್ಯ ಮತ್ತಷ್ಟು ಅಭಿವೃದ್ಧಿಯತ್ತ ಸಾಗಲಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ದಲಿತ ಸಮುದಾಯದ ಪ್ರಭಲ ನಾಯಕರಾಗಿರುವ ಡಾ. ಜಿ. ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆತಿರುವುದು ಸಾಮಾಜಿಕ ನ್ಯಾಯದ ಸಂಕೇತವಾಗಿದೆ ಎಂದು ತಿಳಿಸಿದರು.

ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಸ್ಮರಿಸಿದ ಕಾರ್ಯಕರ್ತರು, ಅವರ ಅಭಿವೃದ್ಧಿ ಕಾರ್ಯಗಳ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನೂತನ ಸರ್ಕಾರದ ಮೇಲಿದೆ ಎಂದು ಹೇಳಿದರು. ರಾಜ್ಯದ ಸಮಗ್ರ ಅಭಿವೃದ್ಧಿ, ರೈತರ ಕಲ್ಯಾಣ, ಯುವಕರಿಗೆ ಉದ್ಯೋಗಾವಕಾಶ ಹಾಗೂ ಸಾಮಾಜಿಕ ಸಮಾನತೆಗಾಗಿ ಹೊಸ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ವಿನಾಯಕ ಪರಾಪೂರ ಅವರ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಕ್ಷದ ವಿವಿಧ ಮುಖಂಡರು, ಪದಾಧಿಕಾರಿಗಳು, ಯುವ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆ ಪರಸ್ಪರ ಸಿಹಿ ತಿನ್ನಿಸಿ ಶುಭಾಶಯ ವಿನಿಮಯ ಮಾಡಿಕೊಂಡ ಕಾರ್ಯಕರ್ತರು, ರಾಜ್ಯ ಸರ್ಕಾರದ ಹೊಸ ನಾಯಕತ್ವಕ್ಕೆ ಶುಭ ಹಾರೈಸಿದರು.

ಸಂಭ್ರಮಾಚರಣೆಯು ಕೆಲಕಾಲ ನಗರದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದ್ದು, ಪಟಾಕಿಗಳ ಸದ್ದು ಹಾಗೂ ಜಯಘೋಷಣೆಗಳಿಂದ ಪ್ರದೇಶ ಹಬ್ಬದ ವಾತಾವರಣವನ್ನು ಪಡೆದುಕೊಂಡಿತ್ತು. ರಾಜ್ಯದ ಹೊಸ ಸರ್ಕಾರ ಜನಪರ ಆಡಳಿತ ನೀಡಲಿ ಎಂದು ಕಾರ್ಯಕರ್ತರು ಆಶಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande