
ವಿಜಯಪುರ, 03 ಜೂನ್ (ಹಿ.ಸ.) :
ಆಂಕರ್ : ಕಾನೂನು ಹೋರಾಟದಲ್ಲಿರುವ ರೈತರು ತಮ್ಮ ಪ್ರಕರಣಗಳನ್ನು ತ್ವರಿತವಾಗಿ ಹಾಗೂ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳುವ ಉದ್ದೇಶದಿಂದ ಲೋಕ ಅದಾಲತ್ನ ಮಹತ್ವವನ್ನು ತಿಳಿಸುವ ವಿಶೇಷ ಗ್ರಾಮಸಭೆಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ಆಯೋಜಿಸಲಾಯಿತು.
ಈ ಗ್ರಾಮಸಭೆಯು ಮಾನ್ಯ ಭೂಸ್ವಾಧೀನಾಧಿಕಾರಿಗಳು ಆಲಮಟ್ಟಿ (ಕೃಷ್ಣಾ ಮೇಲ್ದಂಡೆ ಯೋಜನೆ) ಅವರ ನೇತೃತ್ವದಲ್ಲಿ ಜರುಗಿತು.
ಗ್ರಾಮಸಭೆಯ ಮುಖ್ಯ ಉದ್ದೇಶ ರೈತ ಸಮುದಾಯದಲ್ಲಿ ಲೋಕ ಅದಾಲತ್ ಕುರಿತು ಅರಿವು ಮೂಡಿಸುವುದು ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಪ್ರೋತ್ಸಾಹಿಸುವುದಾಗಿತ್ತು.
ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ಭೂಸ್ವಾಧೀನ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದು, ಇಂತಹ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಕಡಿಮೆ ವೆಚ್ಚದಲ್ಲಿ, ಕಡಿಮೆ ಅವಧಿಯಲ್ಲಿ ಹಾಗೂ ಪರಸ್ಪರ ಒಪ್ಪಂದದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ರೈತರು ನ್ಯಾಯಾಲಯಗಳ ಸುದೀರ್ಘ ಪ್ರಕ್ರಿಯೆಗಳಿಂದ ಮುಕ್ತಿ ಹೊಂದಿ ಶೀಘ್ರ ನ್ಯಾಯ ಪಡೆಯಲು ಲೋಕ ಅದಾಲತ್ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಸ್ವಾಧೀನಗೊಂಡ ಜಮೀನುಗಳಿಗೆ ಸಂಬಂಧಿಸಿದಂತೆ ಹಲವಾರು ರೈತರು ತಮ್ಮ ಸಮಸ್ಯೆಗಳು, ಪರಿಹಾರ ಮೊತ್ತದ ವಿಚಾರಗಳು ಹಾಗೂ ಕಾನೂನು ಪ್ರಕ್ರಿಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಅಧಿಕಾರಿಗಳು ರೈತರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ, ನ್ಯಾಯಸಮ್ಮತ ಪರಿಹಾರ ದೊರಕಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಗ್ರಾಮಸಭೆಯಲ್ಲಿ ಲೋಕ ಅದಾಲತ್ನ ಕಾರ್ಯವೈಖರಿ, ಅದರ ಪ್ರಯೋಜನಗಳು, ಪ್ರಕರಣಗಳ ಇತ್ಯರ್ಥದ ವಿಧಾನ ಹಾಗೂ ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ಸವಿಸ್ತಾರ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ರೈತರು ಈ ಕಾರ್ಯಕ್ರಮದಿಂದ ಉಪಯುಕ್ತ ಮಾಹಿತಿ ದೊರೆತಿದ್ದು, ತಮ್ಮ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ರೈತ ಮುಖಂಡರು, ಗ್ರಾಮಸ್ಥರು, ಕಾನೂನು ಸಲಹೆಗಾರರು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮಸಭೆಯು ರೈತರಲ್ಲಿ ಕಾನೂನು ಅರಿವು ಮೂಡಿಸುವಲ್ಲಿ ಹಾಗೂ ಲೋಕ ಅದಾಲತ್ ಬಗ್ಗೆ ವಿಶ್ವಾಸ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande