
ಪಿಲಿಭೀತ್, 29 ಜೂನ್ (ಹಿ.ಸ.):
ಆ್ಯಂಕರ್:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ನ ಐತಿಹಾಸಿಕ ತಪ್ಪುಗಳ ಪರಿಣಾಮವಾಗಿಯೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಿರ್ಮಾಣವಾಯಿತು ಎಂದು ಆರೋಪಿಸಿದರು. ಇದೇ ವೇಳೆ, ಸಮಾಜವಾದಿ ಪಕ್ಷದ ಸೈಕಲ್ ಓಡಿದರೆ ಗಲಭೆಗಳು ಮುಂದುವರಿಯುತ್ತವೆ ಎಂದೂ ಟೀಕಿಸಿದರು.
ಉತ್ತರ ಪ್ರದೇಶದ ಪಿಲಿಭೀತ್ ಜಿಲ್ಲೆಯ ಪತರಾಸಾ ಕುಂವರ್ಪುರದಲ್ಲಿ ₹569 ಕೋಟಿಗೂ ಅಧಿಕ ವೆಚ್ಚದ 66 ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆ ಕಾಲದ ಕಾಂಗ್ರೆಸ್ ನಾಯಕತ್ವ ದೃಢ ನಿಲುವು ತಾಳಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ ಎಂದು ಹೇಳಿದರು.
ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಹಿಂದೂಗಳು ಹತ್ಯೆಗೀಡಾದರು, ತಮ್ಮ ಪೂರ್ವಿಕರ ನೆಲ ತೊರೆಯಬೇಕಾಯಿತು. ಸ್ವತಂತ್ರ ಭಾರತದಲ್ಲಿ ಗೌರವಯುತ ಜೀವನದ ನಿರೀಕ್ಷೆಯಲ್ಲಿದ್ದ ನಿರಾಶ್ರಿತರ ಬಗ್ಗೆ ಕಾಂಗ್ರೆಸ್ ಯಾವುದೇ ಕಾಳಜಿ ತೋರಲಿಲ್ಲ ಎಂದು ಅವರು ಆರೋಪಿಸಿದರು.
ಸಮಾಜವಾದಿ ಪಕ್ಷದ ಮೇಲೂ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ತುಷ್ಟೀಕರಣದ ರಾಜಕಾರಣದಿಂದ ಅವರಿಗೆ ಹಿಂದುಳಿದವರು, ದಲಿತರು ಮತ್ತು ವಂಚಿತರ ಬಗ್ಗೆ ಯೋಚಿಸಲು ಸಮಯವೇ ಇರಲಿಲ್ಲ. ಮುಸ್ಲಿಮರ ಮತಬ್ಯಾಂಕ್ ರಾಜಕಾರಣವೇ ಅವರ ಪ್ರಮುಖ ಆದ್ಯತೆಯಾಗಿತ್ತು ಎಂದು ಟೀಕಿಸಿದರು.
ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ ಹಾಗೂ ಇತರ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಸಿಎಎ ವಿರುದ್ಧ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದವು ಎಂದು ಆರೋಪಿಸಿದ ಅವರು, ಈಗ ಫಲಾನುಭವಿಗಳಿಗೆ ಪೌರತ್ವ ಪ್ರಮಾಣಪತ್ರ ವಿತರಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಕೇಂದ್ರ ಸಚಿವ ಜಿತಿನ್ ಪ್ರಸಾದ್, ಉತ್ತರ ಪ್ರದೇಶ ಕೃಷಿ ರಾಜ್ಯ ಸಚಿವ ಬಲದೇವ್ ಸಿಂಗ್ ಔಲಖ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ವೇಳೆ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.