ಟ್ರಾಯ್ ಪರೀಕ್ಷೆಯಲ್ಲಿ ಜಿಯೋ ಅಗ್ರಸ್ಥಾನ ; ಬಿಎಸ್ಎನ್ಎಲ್ ಸೇವೆಯಲ್ಲಿ ಹೆಚ್ಚು ಸಮಸ್ಯೆಗಳು
ನಾನಾ
Trai


ನವದೆಹಲಿ, 29 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ನಡೆಸಿದ ಸ್ವತಂತ್ರ ಕ್ಷೇತ್ರ ಪರೀಕ್ಷೆಯಲ್ಲಿ ರಿಲಯನ್ಸ್ ಜಿಯೋ ಮೊಬೈಲ್ ಜಾಲತಾಣ ಗುಣಮಟ್ಟ, ವ್ಯಾಪ್ತಿ ಹಾಗೂ ಡೇಟಾ ವೇಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಬಿಎಸ್ಎನ್ಎಲ್ ಸೇವೆಯಲ್ಲಿ ಅತಿ ಹೆಚ್ಚು ಸಮಸ್ಯೆಗಳು ಕಂಡುಬಂದಿವೆ.

ಟ್ರಾಯ್ ಮೇ 4ರಂದು ಜೋಧ್ಪುರ–ಅಹಮದಾಬಾದ್ ರೈಲು ಮಾರ್ಗದ 456.9 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಸ್ವತಂತ್ರ ‘ಡ್ರೈವ್ ಟೆಸ್ಟ್’ ನಡೆಸಿತು. ಈ ಪರೀಕ್ಷೆಯ ಉದ್ದೇಶ ರೈಲು ಪ್ರಯಾಣದ ವೇಳೆ ವಿವಿಧ ದೂರಸಂಪರ್ಕ ಸಂಸ್ಥೆಗಳ ನೈಜ ಸಮಯದ ನೆಟ್ವರ್ಕ್ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವುದಾಗಿತ್ತು.

ಪರೀಕ್ಷೆಯಲ್ಲಿ ಏರ್ಟೆಲ್, ಬಿಎಸ್ಎನ್ಎಲ್, ರಿಲಯನ್ಸ್ ಜಿಯೋ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಗಳ 2ಜಿ, 3ಜಿ, 4ಜಿ ಮತ್ತು 5ಜಿ ಜಾಲಗಳಲ್ಲಿ ಧ್ವನಿ ಕರೆ ಹಾಗೂ ಡೇಟಾ ಸೇವೆಗಳನ್ನು ಪರಿಶೀಲಿಸಲಾಯಿತು.

ಜಾಲ ವ್ಯಾಪ್ತಿಯಲ್ಲಿ ಜಿಯೋ ಮೇಲುಗೈ

ವರದಿ ಪ್ರಕಾರ, ಜಿಯೋದ 26,136 ಮಾದರಿಗಳಲ್ಲಿ ಕೇವಲ 685 ಸ್ಥಳಗಳಲ್ಲಿ ಮಾತ್ರ ದುರ್ಬಲ ಸಿಗ್ನಲ್ ದಾಖಲಾಗಿದೆ. ಏರ್ಟೆಲ್ನ 26,319 ಮಾದರಿಗಳಲ್ಲಿ 1,843 ಸ್ಥಳಗಳಲ್ಲಿ ದುರ್ಬಲ ಸಿಗ್ನಲ್ ಕಂಡುಬಂದರೆ, ವಿ ಸಂಸ್ಥೆಯ 25,817 ಮಾದರಿಗಳಲ್ಲಿ 5,150 ಹಾಗೂ ಬಿಎಸ್ಎನ್ಎಲ್ನ 23,625 ಮಾದರಿಗಳಲ್ಲಿ 7,368 ಸ್ಥಳಗಳಲ್ಲಿ ದುರ್ಬಲ ಸಿಗ್ನಲ್ ದಾಖಲಾಗಿದೆ.

ನೆಟ್ವರ್ಕ್ ಲಭ್ಯವಿಲ್ಲದ ಅಥವಾ ಅತ್ಯಂತ ಸೀಮಿತ ಸೇವೆ ದೊರೆತ ಸ್ಥಳಗಳ ಸಂಖ್ಯೆಯಲ್ಲಿಯೂ ಬಿಎಸ್ಎನ್ಎಲ್ ಹಿನ್ನಡೆಯಲ್ಲಿದ್ದು, 1,271 ಸ್ಥಳಗಳಲ್ಲಿ ಯಾವುದೇ ಜಾಲ ಸಂಪರ್ಕ ಲಭ್ಯವಾಗಿಲ್ಲ.

ಕರೆ ಗುಣಮಟ್ಟ

ಕಾಲ್ ಡ್ರಾಪ್ ವಿಚಾರದಲ್ಲಿ ಏರ್ಟೆಲ್ ಹಾಗೂ ಜಿಯೋ ಅತ್ಯುತ್ತಮ ಸಾಧನೆ ಮಾಡಿವೆ. ಪರೀಕ್ಷೆಯ ಅವಧಿಯಲ್ಲಿ ಈ ಎರಡೂ ಸಂಸ್ಥೆಗಳ ಜಾಲದಲ್ಲಿ ಒಂದೇ ಒಂದು ಕರೆ ಕೂಡ ಮಧ್ಯದಲ್ಲೇ ಕಡಿತವಾಗಿಲ್ಲ.

ಇದಕ್ಕೆ ವಿರುದ್ಧವಾಗಿ, ಬಿಎಸ್ಎನ್ಎಲ್ನಲ್ಲಿ ಯಶಸ್ವಿಯಾಗಿ ಸಂಪರ್ಕಗೊಂಡ 122 ಕರೆಗಳಲ್ಲಿ 15 ಕರೆಗಳು ಕಡಿತಗೊಂಡರೆ, ವಿ ಸಂಸ್ಥೆಯಲ್ಲಿ 126 ಕರೆಗಳಲ್ಲಿ 4 ಕರೆಗಳು ಡ್ರಾಪ್ ಆಗಿವೆ.

ಡೇಟಾ ವೇಗ

ಡೌನ್ಲೋಡ್ ವೇಗದಲ್ಲಿ ಜಿಯೋ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಸರಾಸರಿ 89.61 ಎಂ.ಬಿ.ಪಿ.ಎಸ್. ವೇಗ ದಾಖಲಿಸಿದೆ. ಏರ್ಟೆಲ್ 48.53 ಎಂ.ಬಿ.ಪಿ.ಎಸ್., ವಿ 12.71 ಎಂ.ಬಿ.ಪಿ.ಎಸ್. ಹಾಗೂ ಬಿಎಸ್ಎನ್ಎಲ್ 7.95 ಎಂ.ಬಿ.ಪಿ.ಎಸ್. ವೇಗ ದಾಖಲಿಸಿವೆ.

ಅಪ್ಲೋಡ್ ವೇಗದಲ್ಲಿ ಏರ್ಟೆಲ್ 11.69 ಎಂ.ಬಿ.ಪಿ.ಎಸ್.ನೊಂದಿಗೆ ಮೊದಲ ಸ್ಥಾನದಲ್ಲಿದ್ದು, ಜಿಯೋ 9.06 ಎಂ.ಬಿ.ಪಿ.ಎಸ್., ವಿ 8.81 ಎಂ.ಬಿ.ಪಿ.ಎಸ್. ಹಾಗೂ ಬಿಎಸ್ಎನ್ಎಲ್ 3.76 ಎಂ.ಬಿ.ಪಿ.ಎಸ್. ವೇಗ ದಾಖಲಿಸಿವೆ.

ವಿವಿಧ ಮಾನದಂಡಗಳ ಮೌಲ್ಯಮಾಪನ

ಈ ಪರೀಕ್ಷೆಯನ್ನು ಜೋಧ್ಪುರ, ಭಗತ್ ಕಿ ಕೋಠಿ, ಲೂನಿ ಜಂಕ್ಷನ್, ಸಮದಡಿ, ಜಾಲೋರ್, ಭೀನ್ಮಾಲ್, ರಾಣಿವಾಡಾ, ಧಾನೇರಾ, ಭೀಲಡಿ, ಪಾಟಣ ಹಾಗೂ ಮೆಹಸಾಣಾ ಜಂಕ್ಷನ್ ಸೇರಿದಂತೆ ನಾನಾ ನಿಲ್ದಾಣಗಳು ಮತ್ತು ರೈಲು ವಿಭಾಗಗಳಲ್ಲಿ ನಡೆಸಲಾಯಿತು.

ಕಾಲ್ ಸಂಪರ್ಕ ಯಶಸ್ಸಿನ ಪ್ರಮಾಣ, ಕಾಲ್ ಡ್ರಾಪ್ ಪ್ರಮಾಣ, ಸಿಗ್ನಲ್ ವ್ಯಾಪ್ತಿ, ಡೌನ್ಲೋಡ್ ಹಾಗೂ ಅಪ್ಲೋಡ್ ವೇಗ, ಲೇಟೆನ್ಸಿ, ಜಿಟರ್ ಮತ್ತು ಪ್ಯಾಕೆಟ್ ಡ್ರಾಪ್ ಸೇರಿದಂತೆ ಹಲವು ಪ್ರಮುಖ ಮಾನದಂಡಗಳನ್ನು ಪರಿಶೀಲಿಸಲಾಯಿತು.

ಟ್ರಾಯ್ ವರದಿಯ ತೀರ್ಮಾನಗಳನ್ನು ಸಂಬಂಧಿತ ದೂರಸಂಪರ್ಕ ಸಂಸ್ಥೆಗಳೊಂದಿಗೆ ಹಂಚಿಕೊಂಡಿದ್ದು, ಅಗತ್ಯ ತಾಂತ್ರಿಕ ಸುಧಾರಣೆಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande