
ನವದೆಹಲಿ, 29 ಜೂನ್ (ಹಿ.ಸ.) :
ಆ್ಯಂಕರ್ : ದೇಶದಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವನ್ನು ಇನ್ನಷ್ಟು ತಗ್ಗಿಸಿ, 2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿ) ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ನಡೆಯಲಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿಯ (ಸಿಸಿಎಚ್ಎಫ್ಡಬ್ಲ್ಯು) 16ನೇ ಸಮ್ಮೇಳನದಲ್ಲಿ ‘ಸುಮನ ರೋಡ್ಮ್ಯಾಪ್–2030’ ಅನ್ನು ಬಿಡುಗಡೆ ಮಾಡಲಿದ್ದಾರೆ.
ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರೂಪಿಸಲಾದ ಈ ಸಮಗ್ರ ಕಾರ್ಯತಂತ್ರವು ವೈಜ್ಞಾನಿಕ ಅಧ್ಯಯನ ಮತ್ತು ಸಾಕ್ಷ್ಯಾಧಾರಿತ ಮಾಹಿತಿಯ ಆಧಾರದ ಮೇಲೆ ಸಿದ್ಧಗೊಂಡಿದೆ. ಕಳೆದ ಒಂದು ದಶಕದಲ್ಲಿ ಭಾರತ ತಾಯಂದಿರ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದರೂ, ಕೆಲವು ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಇನ್ನೂ ತಾಯಿ ಹಾಗೂ ನವಜಾತ ಶಿಶುಗಳ ಮರಣ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. ಈ ಸವಾಲುಗಳನ್ನು ಮನಗಂಡು ಪ್ರತಿ ರಾಜ್ಯದ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಪ್ರತ್ಯೇಕ ಕಾರ್ಯತಂತ್ರವನ್ನು ರೂಪಿಸಲಾಗಿದೆ.
ರೋಡ್ಮ್ಯಾಪ್ನಲ್ಲಿ ಗರ್ಭಧಾರಣೆಗೆ ಮುನ್ನದ ಆರೈಕೆ, ಗರ್ಭಾವಸ್ಥೆಯ ನಿಯಮಿತ ತಪಾಸಣೆ, ಸುರಕ್ಷಿತ ಹೆರಿಗೆ ಹಾಗೂ ಹೆರಿಗೆಯ ನಂತರ ತಾಯಿ ಮತ್ತು ಶಿಶುವಿನ ಆರೈಕೆಯನ್ನು ಸಮಗ್ರವಾಗಿ ಒಳಗೊಂಡಿದೆ. ಇದನ್ನು ಸಂತಾನೋತ್ಪತ್ತಿ ಆರೋಗ್ಯ, ತಾಯಿ–ಮಗು ಆರೋಗ್ಯ, ಕಿಶೋರರ ಆರೋಗ್ಯ, ಕುಟುಂಬ ಯೋಜನೆ ಹಾಗೂ ಪೌಷ್ಟಿಕಾಂಶ ಕಾರ್ಯಕ್ರಮಗಳೊಂದಿಗೆ ಸಂಯೋಜಿಸಿ ಆರೋಗ್ಯ ಸೇವೆಗಳನ್ನು ಸಮನ್ವಯಗೊಳಿಸಲಾಗುತ್ತದೆ.
ಈ ಕಾರ್ಯತಂತ್ರದ ಪ್ರಮುಖ ಅಂಶವೆಂದರೆ ಹೆಚ್ಚಿನ ಅಪಾಯದ ಗರ್ಭಧಾರಣೆಯನ್ನು ಗುರುತಿಸಿ ನಿರ್ವಹಿಸಲು ನಾಲ್ಕು ಹಂತದ ವ್ಯವಸ್ಥೆ ರೂಪಿಸಿರುವುದು. ಗರ್ಭಧಾರಣೆಯ ಆರಂಭಿಕ ಹಂತದಿಂದ ಮೂರನೇ ತ್ರೈಮಾಸಿಕ, ಹೆರಿಗೆ ಸಮಯ ಹಾಗೂ ಹೆರಿಗೆಯ ನಂತರದ ಅವಧಿವರೆಗೆ ಹೆಚ್ಚಿನ ಅಪಾಯದಲ್ಲಿರುವ ತಾಯಂದಿರನ್ನು ಗುರುತಿಸಿ ನಿರಂತರ ಮೇಲ್ವಿಚಾರಣೆ ಮತ್ತು ಸಕಾಲಿಕ ಚಿಕಿತ್ಸೆಗೆ ಒತ್ತು ನೀಡಲಾಗಿದೆ.
ಇದಲ್ಲದೆ, ಆದಿವಾಸಿ ಮತ್ತು ದುರ್ಗಮ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ, ತುರ್ತು ಹೆರಿಗೆ ಸೇವೆಗಳ ಗುಣಮಟ್ಟ, ತುರ್ತು ಸಾರಿಗೆ ವ್ಯವಸ್ಥೆ ಹಾಗೂ ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಹೊಸ ಸವಾಲುಗಳನ್ನೂ ಈ ರೋಡ್ಮ್ಯಾಪ್ನಲ್ಲಿ ಸೇರಿಸಲಾಗಿದೆ.
ಅಸ್ಸಾಂ, ಬಿಹಾರ, ಛತ್ತೀಸ್ಗಢ, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 13 ಆದ್ಯತಾ ರಾಜ್ಯಗಳ 130 ಜಿಲ್ಲೆಗಳಲ್ಲಿ ವಿಶೇಷ ಕಾರ್ಯತಂತ್ರ ಜಾರಿಗೊಳ್ಳಲಿದೆ. ಈ ಜಿಲ್ಲೆಗಳಲ್ಲಿ ಗರ್ಭಿಣಿಯರ ಸಮಯೋಚಿತ ನೋಂದಣಿ, ಅಗತ್ಯವಿರುವ ಎಲ್ಲಾ ಪ್ರಸವಪೂರ್ವ ತಪಾಸಣೆ, ಗುಣಮಟ್ಟದ ವೈದ್ಯಕೀಯ ಸೇವೆ ಹಾಗೂ ಹೆರಿಗೆಯ ನಂತರ ಸಂಸ್ಥೆಯಲ್ಲೇ ಸಮರ್ಪಕ ಆರೈಕೆಯನ್ನು ಖಚಿತಪಡಿಸಲು ‘ಗರ್ಭಿಣಿಯರಿಗಾಗಿ ಸುಮನ ಪ್ಯಾಕೇಜ್’ ಜಾರಿಗೆ ತರಲಾಗುತ್ತದೆ.
ಸಮುದಾಯ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಗರ್ಭಧಾರಣೆಯ ಎಂಟನೇ ಮತ್ತು ಒಂಬತ್ತನೇ ತಿಂಗಳಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಮನೆಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುವುದು, ಅಪಾಯದ ಲಕ್ಷಣಗಳನ್ನು ಗುರುತಿಸುವುದು, ಪೌಷ್ಟಿಕಾಂಶದ ಕುರಿತು ಸಲಹೆ ನೀಡುವುದು, ಸುರಕ್ಷಿತ ಹೆರಿಗೆಗೆ ಸಿದ್ಧತೆ ಹಾಗೂ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಹೆರಿಗೆಯ ನಂತರದ ಅತ್ಯಂತ ಮಹತ್ವದ ಅವಧಿಯಲ್ಲಿ ತಾಯಿಯೊಂದಿಗೆ ಇರುವ ನಾಮನಿರ್ದೇಶಿತ ಆರೈಕೆದಾರರಿಗೆ ಆರ್ಥಿಕ ನೆರವು ನೀಡುವ ಪ್ರಸ್ತಾವವೂ ರೋಡ್ಮ್ಯಾಪ್ನಲ್ಲಿ ಸೇರಿದೆ. ಜೊತೆಗೆ, ದೂರದ ಪ್ರದೇಶಗಳಲ್ಲಿ ತುರ್ತು ರೆಫರಲ್ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು, ಹೆರಿಗೆ ನಿರೀಕ್ಷಣಾ ಗೃಹಗಳು, ತಾಯಿ–ಮಗು ಆರೋಗ್ಯ ವಿಭಾಗಗಳು, ಪ್ರಸೂತಿ ಹೈ ಡಿಪೆಂಡೆನ್ಸಿ ಘಟಕಗಳು ಹಾಗೂ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗರ್ಭಧಾರಣೆಗೆ ಯೋಜನೆ ರೂಪಿಸುತ್ತಿರುವ ಮಹಿಳೆಯರಿಗೆ ಫೋಲಿಕ್ ಆಸಿಡ್ ಮಾತ್ರೆಗಳ ವಿತರಣೆ, ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ತಡೆಗಟ್ಟಲು ಸಮಗ್ರ ಪೌಷ್ಟಿಕಾಂಶ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಗರ್ಭಧಾರಣೆಯಿಂದ ಹೆರಿಗೆಯ ನಂತರದವರೆಗೂ ಹೆಚ್ಚಿನ ಅಪಾಯದ ತಾಯಂದಿರ ಪರಿಣಾಮಕಾರಿ ಮೇಲ್ವಿಚಾರಣೆಗೆ ಒತ್ತು ನೀಡುವಂತೆ ಶಿಫಾರಸು ಮಾಡಲಾಗಿದೆ.
ಸಮುದಾಯದ ಭಾಗವಹಿಸುವಿಕೆಗೆ ಹೆಚ್ಚಿನ ಮಹತ್ವ ನೀಡಿರುವ ಈ ಯೋಜನೆಯಡಿ ‘ಸುಮನ ಪಂಚಾಯತ್’ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತದೆ. ಇದರ ಮೂಲಕ ತಾಯಂದಿರ ಮತ್ತು ಶಿಶುಗಳ ಶೂನ್ಯ ಮರಣ ಪ್ರಮಾಣ, ಎಲ್ಲಾ ಗರ್ಭಿಣಿಯರ ಸಮಯೋಚಿತ ತಪಾಸಣೆ, ಆಸ್ಪತ್ರೆಯಲ್ಲೇ ಹೆರಿಗೆ ಹಾಗೂ ನೂರು ಪ್ರತಿಶತ ಲಸಿಕಾಕರಣ ಸಾಧಿಸುವ ಗುರಿ ಹೊಂದಲಾಗಿದೆ. ಜೊತೆಗೆ ‘ಮದರ್ಸ್ ಪಿಕ್ನಿಕ್’ ಎಂಬ ಹೊಸ ಕಾರ್ಯಕ್ರಮದ ಮೂಲಕ ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಮಹಿಳೆಯರು ಹಾಗೂ ಸಮುದಾಯದಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ‘ಸುಮನ ರೋಡ್ಮ್ಯಾಪ್–2030’ ರಾಜ್ಯಗಳು ಮತ್ತು ಜಿಲ್ಲೆಗಳ ಅಗತ್ಯಗಳಿಗೆ ತಕ್ಕ ಗುರಿ ಆಧಾರಿತ ಕಾರ್ಯತಂತ್ರ, ಉತ್ತಮ ಆರೋಗ್ಯ ಮೂಲಸೌಕರ್ಯ, ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಮಯಬದ್ಧ ಅನುಷ್ಠಾನದ ಮೂಲಕ ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯ ಸೇವೆಗೆ ಹೊಸ ಬಲ ತುಂಬಲಿದ್ದು, 2030ರೊಳಗೆ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ರಾಷ್ಟ್ರೀಯ ಗುರಿ ಸಾಧಿಸಲು ಮಹತ್ವದ ಪಾತ್ರ ವಹಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.