
ನವದೆಹಲಿ, 29 ಜೂನ್ (ಹಿ.ಸ.):
ಆ್ಯಂಕರ್:
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭಕ್ತರು ನೀಡಿದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮ ಹಾಗೂ ದೇಣಿಗೆ ದುರುಪಯೋಗದ ಆರೋಪಗಳ ಕುರಿತು ತಕ್ಷಣವೇ ವಿಚಾರಣೆ ನಡೆಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಭಾರತದ ಸುಪ್ರೀಂ ಕೋರ್ಟ್ ತುರ್ತು ಪಟ್ಟಿಗೆ ಸೇರಿಸಲು ನಿರಾಕರಿಸಿದೆ.
ವಕೀಲರಾದ ಅಜಯ್ ಕುಮಾರ್ ರಾಯ್ ಹಾಗೂ ದಿನೇಶ್ ಕುಮಾರ್ ಯಾದವ್ ಸಲ್ಲಿಸಿರುವ ಅರ್ಜಿಯಲ್ಲಿ, ಈ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ ನೇತೃತ್ವದ ವಿಶೇಷ ತನಿಖಾ ತಂಡ (ಎಸ್ಐಟಿ) ಮೂಲಕ ನಡೆಸುವಂತೆ ಕೋರಲಾಗಿದೆ. ಜೊತೆಗೆ, ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಣಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹಣಕಾಸು ಅಕ್ರಮ ತಡೆಗಟ್ಟಲು ಸಮರ್ಪಕ ವ್ಯವಸ್ಥೆ ರೂಪಿಸಬೇಕೆಂದು ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.
ಅರ್ಜಿಯಲ್ಲಿ, ದೇಣಿಗೆ ಕಳ್ಳತನದ ಕುರಿತ ವರದಿಗಳು ನಿಜವಾಗಿರಲಿ ಅಥವಾ ಸುಳ್ಳಾಗಿರಲಿ, ಇಂತಹ ಸುದ್ದಿಗಳು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಎಸ್ಐಟಿ ಯಾವುದೇ ಎಫ್ಐಆರ್ ದಾಖಲಿಸದೇ ತನಿಖೆ ಆರಂಭಿಸಿರುವುದು ಪ್ರಶ್ನಾರ್ಹ ಎಂದು ಹೇಳಲಾಗಿದೆ.
ಅರ್ಜಿದಾರರು, ಟ್ರಸ್ಟ್ಗೆ ಸಂಬಂಧಿಸಿದಂತೆ ಕಾಣೆಯಾಗಿರುವ ಹಣ ಹಾಗೂ ಇತರೆ ಹಣಕಾಸು ಅಕ್ರಮಗಳ ಬಗ್ಗೆ ಸ್ವತಂತ್ರ ಮತ್ತು ಪರಿಣತಿ ಹೊಂದಿರುವ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಮೂರು ಸದಸ್ಯರ ಎಸ್ಐಟಿಯಲ್ಲಿ ಪ್ರಾದೇಶಿಕ ಆಯುಕ್ತ ವಿಜಯ್ ವಿಶ್ವಾಸ್ ಪಂತ್, ಐಜಿ ಕಿರಣ್ ಎಸ್ ಹಾಗೂ ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ ರತನ್ ಸದಸ್ಯರಾಗಿದ್ದಾರೆ.
ಇದಕ್ಕೂ ಮುನ್ನ ವಕೀಲ ಅನೂಪ್ ಅವಸ್ಥಿ ಅವರು ಸುಪ್ರೀಂ ಕೋರ್ಟ್ಗೆ ಪತ್ರ ಬರೆದು, ಪ್ರಕರಣವನ್ನು ಸ್ವಯಂಪ್ರೇರಿತವಾಗಿ (ಸುವೋ ಮೋಟು) ಪರಿಗಣಿಸಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿದ್ದರು. ರಾಮ ಮಂದಿರದ ದೇಣಿಗೆ ಹಣದಲ್ಲಿ ಭಾರಿ ಪ್ರಮಾಣದ ಹಣಕಾಸು ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದು, ಕೆಲವು ಮಾಜಿ ಸಿಬ್ಬಂದಿ ಹಾಗೂ ಶಂಕಿತರ ವಿರುದ್ಧ ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪಗಳೂ ಇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಆಡಳಿತಾತ್ಮಕ ತನಿಖೆ ಮಾತ್ರ ಸಾಕಾಗುವುದಿಲ್ಲ. ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆದರೆ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.