
ನವದೆಹಲಿ, 28 ಜೂನ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪ್ರಸಾರವಾದ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನದ ಮಾತು' (135ನೇ ಸಂಚಿಕೆ)ಯಲ್ಲಿ ದೇಶದ ವಿವಿಧ ಕ್ಷೇತ್ರಗಳ ಸಾಧನೆಗಳು, ಸ್ವದೇಶಿ ರಕ್ಷಣಾ ಉತ್ಪಾದನೆ, ಯೋಗದ ಜಾಗತಿಕ ಜನಪ್ರಿಯತೆ, ಪರಿಸರ ಸಂರಕ್ಷಣೆ, ಕ್ರೀಡೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಪ್ರಸ್ತಾಪಿಸಿದರು.
2026ರ ಮೊದಲಾರ್ಧದಲ್ಲಿ ಭಾರತ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಆತ್ಮನಿರ್ಭರ ಭಾರತದತ್ತ ದೇಶ ಮತ್ತಷ್ಟು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು.
ಸ್ವದೇಶಿ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ
ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಮೂರು ಹೊಸ ಯುದ್ಧನೌಕೆಗಳು ಸೇರ್ಪಡೆಯಾಗಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಅವುಗಳ ವಿನ್ಯಾಸ, ನಿರ್ಮಾಣ ಹಾಗೂ ತಂತ್ರಜ್ಞಾನ ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ಇದು ಆತ್ಮನಿರ್ಭರ ಭಾರತ ಅಭಿಯಾನದ ಮಹತ್ವದ ಯಶಸ್ಸಾಗಿದ್ದು, ದೇಶದ ರಕ್ಷಣಾ ಉತ್ಪಾದನಾ ಸಾಮರ್ಥ್ಯ ಹೊಸ ಎತ್ತರ ತಲುಪುತ್ತಿದೆ ಎಂದರು.
ಭಾರತದಲ್ಲಿ ನಿರ್ಮಿತ ಸಿ-295 ಸೇನಾ ಸಾರಿಗೆ ವಿಮಾನವು ಇದೇ ತಿಂಗಳು ಮೊದಲ ಯಶಸ್ವಿ ಹಾರಾಟ ನಡೆಸಿರುವುದನ್ನೂ ಅವರು ಉಲ್ಲೇಖಿಸಿದರು. ದೇಶದಲ್ಲೇ 40 ವಿಮಾನಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಇದರಿಂದ ಏರೋಸ್ಪೇಸ್ ಕ್ಷೇತ್ರಕ್ಕೆ ಉತ್ತೇಜನ ಸಿಗುವುದರ ಜೊತೆಗೆ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ (ಎಂಎಸ್ಎಂಇ) ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ಹೇಳಿದರು.
ಅಲ್ಲದೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿಗಳನ್ನು ಅಭಿನಂದಿಸಿದ ಅವರು, ಸ್ವದೇಶಿ ದೀರ್ಘ ವ್ಯಾಪ್ತಿಯ ಭೂ ದಾಳಿ ಕ್ರೂಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.
ವಿಶ್ವದಾದ್ಯಂತ ಯೋಗಕ್ಕೆ ಅಭೂತಪೂರ್ವ ಸ್ಪಂದನೆ
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಈ ವರ್ಷ ವಿಶ್ವದಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲ್ಪಟ್ಟಿದ್ದು, 2,500ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳು ನಡೆದವು ಎಂದು ಪ್ರಧಾನಿ ಹೇಳಿದರು. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಕೋಟ್ಯಂತರ ಜನರು ಯೋಗಾಭ್ಯಾಸದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನಶೈಲಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಅಹಮದಾಬಾದ್ನಲ್ಲಿ ನಡೆದ ವಿಶ್ವ ಯೋಗಾಸನ ಚಾಂಪಿಯನ್ಶಿಪ್–2026ರಲ್ಲಿ ಭಾರತೀಯ ಆಟಗಾರರು 114 ಪದಕಗಳನ್ನು, ಅದರಲ್ಲೂ 102 ಚಿನ್ನದ ಪದಕಗಳನ್ನು ಗೆದ್ದು ವಿಶ್ವ ವೇದಿಕೆಯಲ್ಲಿ ಭಾರತದ ಯೋಗ ಪರಂಪರೆಯ ಶ್ರೇಷ್ಠತೆಯನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಶಂಸಿಸಿದರು.
ಅಸ್ಸಾಂನ 'ಹರ್ಗಿಲಾ' ಸಂರಕ್ಷಣಾ ಅಭಿಯಾನಕ್ಕೆ ಶ್ಲಾಘನೆ
ಅಸ್ಸಾಂನಲ್ಲಿ ಅಪರೂಪದ ಹರ್ಗಿಲಾ ಪಕ್ಷಿ ಸಂರಕ್ಷಣೆಗೆ ಕೈಗೊಂಡಿರುವ ಜನಾಂದೋಲನವನ್ನು ಪ್ರಧಾನಿ ವಿಶೇಷವಾಗಿ ಉಲ್ಲೇಖಿಸಿದರು. ಒಂದು ಕಾಲದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತಿದ್ದ ಈ ಪಕ್ಷಿಯ ಬಗ್ಗೆ ಜಾಗೃತಿ ಮೂಡಿಸಲು ಜೀವಶಾಸ್ತ್ರಜ್ಞೆ ಪೂರ್ಣಿಮಾ ದೇವಿ ಬರ್ಮನ್ ಹಾಗೂ ಸಾವಿರಾರು ಮಹಿಳೆಯರು ಸೇರಿ 'ಹರ್ಗಿಲಾ ಆರ್ಮಿ'ಯನ್ನು ರಚಿಸಿ ಯಶಸ್ವಿ ಸಂರಕ್ಷಣಾ ಕಾರ್ಯ ನಡೆಸಿದ್ದಾರೆ ಎಂದು ಹೇಳಿದರು. ಜನಸಹಭಾಗಿತ್ವದ ಮೂಲಕ ಸಾಮಾಜಿಕ ಮನೋಭಾವವನ್ನೇ ಬದಲಾಯಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದರು.
ನಾಗಾಲ್ಯಾಂಡ್ನಲ್ಲಿ ಕ್ರೀಡಾ ಕ್ರಾಂತಿ
ನಾಗಾಲ್ಯಾಂಡ್ನಲ್ಲಿ ಮಕ್ಕಳಿಗಾಗಿ ಆರಂಭಿಸಿರುವ 'ನಾಗಾಲ್ಯಾಂಡ್ ಬೇಬಿ ಲೀಗ್' ಫುಟ್ಬಾಲ್ ಸ್ಪರ್ಧೆಯನ್ನು ಪ್ರಧಾನಿ ಶ್ಲಾಘಿಸಿದರು. ಐದು ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕ್ರೀಡೆಯ ಮೂಲಕ ಪ್ರತಿಭೆ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಇದು ವೇದಿಕೆಯಾಗುತ್ತಿದೆ ಎಂದು ಹೇಳಿದರು.
ಅದೇ ರೀತಿ 'ನಾಗಾಲ್ಯಾಂಡ್ ವುಮೆನ್ ಫುಟ್ಸಲ್ ಲೀಗ್' ಮಹಿಳಾ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸಿದ್ದು, ಮಹಿಳೆಯರ ಕ್ರೀಡಾ ಭಾಗವಹಿಸುವಿಕೆಗೆ ಹೊಸ ಉತ್ತೇಜನ ನೀಡಿದೆ ಎಂದು ಹೇಳಿದರು.
ಸಾಮಾಜಿಕ ಭದ್ರತಾ ಯೋಜನೆಗಳ ಮಹತ್ವ
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಕುರಿತು ಮಾತನಾಡಿದ ಪ್ರಧಾನಿ, ಕೇವಲ ₹20 ವಾರ್ಷಿಕ ಪ್ರೀಮಿಯಂನಲ್ಲಿ ₹2 ಲಕ್ಷದ ಅಪಘಾತ ವಿಮೆ ಒದಗಿಸುವ ಈ ಯೋಜನೆಗೆ ಈಗಾಗಲೇ 58 ಕೋಟಿಗೂ ಹೆಚ್ಚು ಜನರು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಹಾಗೆಯೇ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮೂಲಕ ₹436 ವಾರ್ಷಿಕ ಪ್ರೀಮಿಯಂನಲ್ಲಿ ₹2 ಲಕ್ಷದ ಜೀವ ವಿಮೆ ಸೌಲಭ್ಯ ದೊರೆಯುತ್ತಿದ್ದು, 27 ಕೋಟಿಗೂ ಅಧಿಕ ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು. ಈ ಯೋಜನೆಗಳ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ತಲುಪಿಸುವಂತೆ ಅವರು ಕರೆ ನೀಡಿದರು.
ಮದುವೆಯಲ್ಲಿ ವಿಭಿನ್ನ ಸಾಮಾಜಿಕ ಸೇವೆ
ಮಹಾರಾಷ್ಟ್ರದ ಬಹಾದುರ್ಪುರ ಗ್ರಾಮದ ಪೇಠ್ಕರ್ ಕುಟುಂಬದ ಉದಾಹರಣೆಯನ್ನು ಪ್ರಧಾನಿ ಹಂಚಿಕೊಂಡರು. ಮದುವೆ ಸಮಾರಂಭದಲ್ಲಿ ಸಾಂಪ್ರದಾಯಿಕ ಉಡುಗೊರೆಗಳ ಬದಲಾಗಿ ಗ್ರಾಮದ ಸುಮಾರು 3,500 ಜನರಿಗೆ ತಲಾ ₹1 ಲಕ್ಷ ಅಪಘಾತ ವಿಮೆ ಮಾಡಿಸಿರುವ ಈ ಕುಟುಂಬದ ಸಾಮಾಜಿಕ ಕಾಳಜಿಯನ್ನು ಅವರು ಶ್ಲಾಘಿಸಿದರು.
ತಮ್ಮ ಜೀವನದ ವಿಶೇಷ ಸಂದರ್ಭಗಳನ್ನು ಸಮಾಜಮುಖಿ ಕಾರ್ಯಗಳೊಂದಿಗೆ ಜೋಡಿಸಿ, ಅಗತ್ಯವಿರುವವರಿಗೆ ನೆರವಾಗುವ ಸಂಸ್ಕೃತಿಯನ್ನು ಬೆಳೆಸುವಂತೆ ಪ್ರಧಾನಿ ದೇಶದ ಜನತೆಗೆ ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.