
ನವದೆಹಲಿ, 24 ಜೂನ್ (ಹಿ.ಸ.) :
ಆ್ಯಂಕರ್ : ದೆಹಲಿಯಿಂದ ಅಮೃತಸರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾದ ಎಐ-479 ವಿಮಾನವು ತಾಂತ್ರಿಕ ದೋಷದ ಕಾರಣ ನಿಗದಿತ ಮಾರ್ಗದಿಂದ ವಿಚಲಿತಗೊಂಡು ಪಾಕಿಸ್ತಾನದ ವಾಯುಪ್ರದೇಶಕ್ಕೆ ಪ್ರವೇಶಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಬಳಿಕ ಪಾಕಿಸ್ತಾನದ ವಾಯು ಸಂಚಾರ ನಿಯಂತ್ರಣ ಪ್ರಾಧಿಕಾರದಿಂದ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತಕ್ಷಣವೇ ಹಿಂದಿರುಗಿಸಿ ಭಾರತೀಯ ವಾಯುಪ್ರದೇಶಕ್ಕೆ ಕರೆತರಲಾಯಿತು.
ಈ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ ಅಧಿಕಾರಿಗಳ ಮೂಲಗಳ ಪ್ರಕಾರ, ವಿಮಾನದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಅದು ನಿಗದಿತ ಮಾರ್ಗದಿಂದ ದಾರಿ ತಪ್ಪಿತ್ತು. ಘಟನೆಯ ಕುರಿತು ತನಿಖೆ ಮುಂದುವರಿದಿದೆ.
ಮಾಹಿತಿಯ ಪ್ರಕಾರ, ಏರ್ಬಸ್ ಎ321 ಮಾದರಿಯ ಈ ವಿಮಾನವು ಸೋಮವಾರ ರಾತ್ರಿ 9.07ಕ್ಕೆ ದೆಹಲಿಯಿಂದ ಅಮೃತಸರದತ್ತ ಹಾರಾಟ ಆರಂಭಿಸಿತ್ತು. ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ವಿಮಾನ ತನ್ನ ನಿಗದಿತ ಮಾರ್ಗದಿಂದ ಹೊರಬಂದಿತ್ತು. ಆದರೆ ಸಮಯೋಚಿತವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಿ ವಿಮಾನವನ್ನು ಸುರಕ್ಷಿತವಾಗಿ ಹಿಂದಿರುಗಿಸಲಾಯಿತು.
ಇದೇ ವೇಳೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ನಿಗದಿತ ಸಮಯ ಮೀರಿದ್ದರಿಂದ ಅಲ್ಲಿಗೆ ತಕ್ಷಣ ಲ್ಯಾಂಡಿಂಗ್ಗೆ ಅನುಮತಿ ದೊರೆಯಲಿಲ್ಲ. ಹೀಗಾಗಿ ವಿಮಾನವನ್ನು ಮತ್ತೆ ದೆಹಲಿಗೆ ಮರಳಿಸಿ ಸುರಕ್ಷಿತವಾಗಿ ಇಳಿಸಲಾಯಿತು.
ಸುಮಾರು ಎರಡು ಗಂಟೆಗಳ ಬಳಿಕ ಪುನಃ ಅನುಮತಿ ದೊರೆತ ನಂತರ ವಿಮಾನ ಅಮೃತಸರದತ್ತ ಹೊರಟು, ಮುಂಜಾನೆ ಸುಮಾರು 2.30ರ ವೇಳೆಗೆ ಸುರಕ್ಷಿತವಾಗಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಈ ಬೆಳವಣಿಗೆಯಿಂದ ಪ್ರಯಾಣಿಕರು ಸುಮಾರು ನಾಲ್ಕು ಗಂಟೆಗಳ ವಿಳಂಬವನ್ನು ಅನುಭವಿಸಬೇಕಾಯಿತು. ರಾತ್ರಿ 10.30ರೊಳಗೆ ಅಮೃತಸರ ತಲುಪಬೇಕಿದ್ದ ಪ್ರಯಾಣಿಕರು ತಡರಾತ್ರಿಯಷ್ಟೇ ತಮ್ಮ ಗಮ್ಯಸ್ಥಾನ ತಲುಪಿದ್ದು, ಅಸಮಾಧಾನ ವ್ಯಕ್ತಪಡಿಸಿದರು.
ಘಟನೆಯ ನಿಖರ ಕಾರಣ ಮತ್ತು ತಾಂತ್ರಿಕ ದೋಷದ ಸ್ವರೂಪದ ಬಗ್ಗೆ ವಿಮಾನಯಾನ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.