ಛತ್ತೀಸ್ಗಢದಲ್ಲಿ ಅಮೂಲ್ಯ ವಜ್ರಗಳ ಪತ್ತೆ ; ದೇಶಕ್ಕೆ ಹೊಸ ವಜ್ರ ನಿಕ್ಷೇಪದ ನಿರೀಕ್ಷೆ
ನವದೆಹಲಿ, 23 ಜೂನ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯ ಸರಾಯಿಪಾಲಿ ಪ್ರದೇಶದ ಬಲೌದಾ-ಬೆಲಮುಂಡಿ ವಜ್ರ ಪ್ರದೇಶದಲ್ಲಿ ನಡೆದ ವೈಜ್ಞಾನಿಕ ಅನ್ವೇಷಣೆಯ ವೇಳೆ ಐದು ಉನ್ನತ ಗುಣಮಟ್ಟದ ವಜ್ರಗಳು ಪತ್ತೆಯಾಗಿವೆ. ಈ ವಜ್ರಗಳ ಒಟ್ಟು ತೂಕ 1.22 ಕ್ಯಾರೆಟ್ ಆಗಿದ್ದು, ಭವಿಷ್ಯದಲ್ಲಿ ಈ ಪ್ರದ
ವಜ್ರ ಗಣಿಗಾರಿಕೆ


ನವದೆಹಲಿ, 23 ಜೂನ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯ ಸರಾಯಿಪಾಲಿ ಪ್ರದೇಶದ ಬಲೌದಾ-ಬೆಲಮುಂಡಿ ವಜ್ರ ಪ್ರದೇಶದಲ್ಲಿ ನಡೆದ ವೈಜ್ಞಾನಿಕ ಅನ್ವೇಷಣೆಯ ವೇಳೆ ಐದು ಉನ್ನತ ಗುಣಮಟ್ಟದ ವಜ್ರಗಳು ಪತ್ತೆಯಾಗಿವೆ. ಈ ವಜ್ರಗಳ ಒಟ್ಟು ತೂಕ 1.22 ಕ್ಯಾರೆಟ್ ಆಗಿದ್ದು, ಭವಿಷ್ಯದಲ್ಲಿ ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ವಜ್ರ ನಿಕ್ಷೇಪಗಳು ದೊರೆಯುವ ಸಾಧ್ಯತೆಯ ಬಗ್ಗೆ ಹೊಸ ಆಶಾಭಾವನೆ ಮೂಡಿಸಿದೆ.

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ ಮತ್ತು ಛತ್ತೀಸ್ಗಢ ಖನಿಜ ಅಭಿವೃದ್ಧಿ ನಿಗಮದ ಜಂಟಿ ಸಂಸ್ಥೆಯು ಈ ಮಹತ್ವದ ಆವಿಷ್ಕಾರವನ್ನು ಅಧಿಕೃತವಾಗಿ ದೃಢಪಡಿಸಿದೆ. ಸಂಸ್ಥೆಯ ಮಾಹಿತಿ ಪ್ರಕಾರ, ಬಲೌದಾ-ಬೆಲಮುಂಡಿ ವಜ್ರ ಪ್ರದೇಶದಿಂದ ಸಂಗ್ರಹಿಸಲಾದ 200 ಟನ್ ಖನಿಜ ವಸ್ತುಗಳನ್ನು ಸಂಸ್ಕರಿಸಿದ ಬಳಿಕ ಈ ಐದು ವಜ್ರಗಳು ಪತ್ತೆಯಾಗಿವೆ.

ತಜ್ಞರ ಅಭಿಪ್ರಾಯದಂತೆ, ಈ ಪ್ರದೇಶದಲ್ಲಿ ಮೊದಲ ಹಂತದಲ್ಲಿಯೇ ಉತ್ತಮ ಗುಣಮಟ್ಟದ ವಜ್ರಗಳು ದೊರೆತಿರುವುದು ಮಹತ್ವದ ಸಾಧನೆಯಾಗಿದ್ದು, ಭೂಗರ್ಭದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ವಜ್ರ ಸಂಗ್ರಹ ಇರಬಹುದೆಂಬ ನಿರೀಕ್ಷೆಯನ್ನು ಬಲಪಡಿಸಿದೆ.

ಈ ಪ್ರದೇಶದಲ್ಲಿ ಹೊಳೆಗಳ ಮಣ್ಣಿನ ಮಾದರಿಗಳ ಸಂಗ್ರಹ, ಭೂಭೌತಿಕ ಸಮೀಕ್ಷೆ ಹಾಗೂ 500 ಮೀಟರ್ ಆಳದ ಪರಿಶೋಧನಾ ಕೊರೆತ ಕಾರ್ಯಗಳನ್ನು ನಡೆಸಿದ ಬಳಿಕ ವಜ್ರಗಳಿರುವ ಸಾಧ್ಯತೆಯ ಪ್ರದೇಶವನ್ನು ಗುರುತಿಸಲಾಗಿತ್ತು. ನಂತರ 200 ಟನ್ ಖನಿಜ ವಸ್ತುಗಳನ್ನು ಮಧ್ಯಪ್ರದೇಶದ ಪನ್ನಾದಲ್ಲಿರುವ ವಜ್ರ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗಿದ್ದು, ಪರೀಕ್ಷೆಯ ವೇಳೆ ಐದು ವಜ್ರಗಳು ಪತ್ತೆಯಾಗಿವೆ.

ಪತ್ತೆಯಾದ ವಜ್ರಗಳಲ್ಲಿ ಎರಡು ಬಿಳಿ ಬಣ್ಣದ ಅತ್ಯುನ್ನತ ಗುಣಮಟ್ಟದ ವಜ್ರಗಳಾಗಿದ್ದು, ಅವುಗಳ ತೂಕ ಕ್ರಮವಾಗಿ 0.19 ಮತ್ತು 0.06 ಕ್ಯಾರೆಟ್ ಆಗಿದೆ. ಇದರ ಜೊತೆಗೆ 0.32 ಕ್ಯಾರೆಟ್ ತೂಕದ ಹಳದಿ ಬಣ್ಣದ ಒಂದು ವಜ್ರ ಹಾಗೂ 0.59 ಮತ್ತು 0.06 ಕ್ಯಾರೆಟ್ ತೂಕದ ಎರಡು ಕಂದು ಬಣ್ಣದ ವಜ್ರಗಳು ದೊರೆತಿವೆ.

ಸಂಸ್ಥೆಯು ವಜ್ರಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ವ್ಯವಸ್ಥೆ ಹೊಂದಿರದ ಕಾರಣ, ಪತ್ತೆಯಾದ ಎಲ್ಲ ಐದು ವಜ್ರಗಳನ್ನು ಪನ್ನಾದಲ್ಲಿರುವ ಭದ್ರ ಸಂಗ್ರಹ ಕೊಠಡಿಯಲ್ಲಿ ಇರಿಸಲಾಗಿದೆ.

ಖನಿಜ ತಜ್ಞರ ಪ್ರಕಾರ, ಹೊಸ ವಜ್ರ ಪ್ರದೇಶಗಳ ಪತ್ತೆ ಸಾಮಾನ್ಯವಾಗಿ ಸಣ್ಣ ಪ್ರಮಾಣದ ಮಾದರಿಗಳಿಂದಲೇ ಆರಂಭವಾಗುತ್ತದೆ. ಆದ್ದರಿಂದ ಐದು ವಜ್ರಗಳ ಪತ್ತೆ ಸಂಖ್ಯೆಯಲ್ಲಿ ಸಣ್ಣದಾಗಿ ಕಂಡರೂ, ಭೂವೈಜ್ಞಾನಿಕ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದಾಗಿದೆ. ಈ ಆವಿಷ್ಕಾರವು ಮುಂದಿನ ದಿನಗಳಲ್ಲಿ ವಿಸ್ತೃತ ಸಮೀಕ್ಷೆ ಹಾಗೂ ವಾಣಿಜ್ಯ ಮಟ್ಟದ ವಜ್ರ ಗಣಿಗಾರಿಕೆಗೆ ದಾರಿ ತೆರೆದುಕೊಡಬಹುದು.

ಭಾರತವು ವಿಶ್ವದಲ್ಲೇ ಅತಿದೊಡ್ಡ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕೇಂದ್ರವಾಗಿದ್ದರೂ, ಕಚ್ಚಾ ವಜ್ರಗಳಿಗಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಮದುಗಳ ಮೇಲೆ ಅವಲಂಬಿತವಾಗಿದೆ. ಛತ್ತೀಸ್ಗಢದಲ್ಲಿ ಕಂಡುಬಂದಿರುವ ಈ ಹೊಸ ವಜ್ರ ಸಂಪತ್ತು ದೇಶದ ಆತ್ಮನಿರ್ಭರತೆಯ ಗುರಿಗೆ ಬಲ ನೀಡುವ ಸಾಧ್ಯತೆ ಇದೆ. ವಾಣಿಜ್ಯ ಮಟ್ಟದ ಗಣಿಗಾರಿಕೆ ಆರಂಭವಾದರೆ ರಾಜ್ಯದಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಆದಾಯದಲ್ಲಿ ಗಮನಾರ್ಹ ಏರಿಕೆ ಆಗುವ ನಿರೀಕ್ಷೆಯಿದೆ.

ಈ ಸಾಧನೆ ಕುರಿತು ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಸಂತಸ ವ್ಯಕ್ತಪಡಿಸಿದ್ದು, “ಮಹಾಸಮುಂದ್ ಜಿಲ್ಲೆಯಲ್ಲಿ ವಜ್ರಗಳ ಪತ್ತೆ ರಾಜ್ಯಕ್ಕೆ ಮಹತ್ವದ ಸಾಧನೆಯಾಗಿದೆ. ಇದು ಛತ್ತೀಸ್ಗಢದ ಸಮೃದ್ಧ ಖನಿಜ ಸಂಪತ್ತನ್ನು ಪ್ರತಿಬಿಂಬಿಸುವುದರ ಜೊತೆಗೆ ಅಭಿವೃದ್ಧಿ, ಹೂಡಿಕೆ ಮತ್ತು ಉದ್ಯೋಗಾವಕಾಶಗಳಿಗೆ ಹೊಸ ದಾರಿಗಳನ್ನು ತೆರೆಯಲಿದೆ” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande