
ನವದೆಹಲಿ, 23 ಜೂನ್ (ಹಿ.ಸ.) :
ಆ್ಯಂಕರ್ : ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಗೂಗಲ್, ಸಂದೇಶ ವಿನಿಮಯ ವೇದಿಕೆಯಾದ ಟೆಲಿಗ್ರಾಂ ಅನ್ನು ಮಂಗಳವಾರ ತನ್ನ ಪ್ಲೇ ಸ್ಟೋರ್ ನಲ್ಲಿ ಮತ್ತೆ ಲಭ್ಯವಾಗುವಂತೆ ಮಾಡಿದೆ. ಕೇಂದ್ರ ಸರ್ಕಾರ ವಿಧಿಸಿದ್ದ ತಾತ್ಕಾಲಿಕ ನಿರ್ಬಂಧವು ಜೂನ್ 22ರ ಮಧ್ಯರಾತ್ರಿಯಿಂದ ಅಂತ್ಯಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ಲೇ ಸ್ಟೋರ್ನಲ್ಲಿ ಮರುಸ್ಥಾಪನೆಯಾಗುವ ಮುನ್ನವೇ ಟೆಲಿಗ್ರಾಂ ಕೆಲವು ಹಾಲಿ ಬಳಕೆದಾರರಿಗೆ ಕಾರ್ಯನಿರ್ವಹಿಸಲು ಆರಂಭಿಸಿತ್ತು. ಆದರೆ ಮಂಗಳವಾರ ಬೆಳಿಗ್ಗೆ 10 ಗಂಟೆಯವರೆಗೆ ಆ್ಯಪಲ್ನ ಆಪ್ ಸ್ಟೋರ್ನಲ್ಲಿ ಈ ಅಪ್ಲಿಕೇಶನ್ ಡೌನ್ಲೋಡ್ಗೆ ಲಭ್ಯವಾಗಿರಲಿಲ್ಲ. ಈ ಕುರಿತು ಕಳುಹಿಸಲಾದ ಇ-ಮೇಲ್ಗೆ ಆ್ಯಪಲ್ ಸಂಸ್ಥೆಯಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.
ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್-ಯುಜಿ) ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಗೂಗಲ್ ಮತ್ತು ಆ್ಯಪಲ್ ಸಂಸ್ಥೆಗಳಿಗೆ ಜೂನ್ 22ರವರೆಗೆ ತಮ್ಮ ವೇದಿಕೆಗಳಿಂದ ಟೆಲಿಗ್ರಾಂ ಅನ್ನು ತೆಗೆದುಹಾಕುವಂತೆ ಸೂಚಿಸಿತ್ತು.
ದೇಶದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸುವ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದ ಹಿನ್ನೆಲೆಯಲ್ಲಿ ಮೇ 3ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ನಂತರ ಜೂನ್ 21ರಂದು ಮರುಪರೀಕ್ಷೆ ನಡೆಸಲಾಗಿದ್ದು, ಇದುವರೆಗೆ ಯಾವುದೇ ಅಕ್ರಮ ಅಥವಾ ಅವ್ಯವಹಾರದ ವರದಿಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಲಿಗ್ರಾಂ ಮರುಸ್ಥಾಪನೆಯೊಂದಿಗೆ ಹೊಸ ಬಳಕೆದಾರರು ಮತ್ತೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ದೊರೆತಿದ್ದು, ತಾತ್ಕಾಲಿಕ ನಿರ್ಬಂಧಕ್ಕೆ ತೆರೆ ಬಿದ್ದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.